ಕೋಲ್ಕತಾ, ಮೇ 21 (Daijiworld News/MB) : ರೂಂ ಸಾನಿಟೈಸ್ ಮಾಡಿಲ್ಲ ಎಂಬ ಕಾರಣಕ್ಕೆ ಅಂಫಾನ್ ಚಂಡಮಾರುತ ಹಿನ್ನಲೆಯಲ್ಲಿ ನಿಯೋಜನೆಯಾಗಿರುವ ಸುಮಾರು 500 ಮಂದಿ ಪೊಲೀಸ್ ಪೇದೆಗಳು ಸೇರಿಕೊಂಡು ತಮ್ಮ ವರಿಷ್ಠಾಧಿಕಾರಿಯ ಮೇಲೆಯೇ ಹಲ್ಲೆ ನಡೆಸಿರುವ ಘಟನೆ ಕೋಲ್ಕತಾದಲ್ಲಿ ನಡೆದಿದೆ.
ಕರ್ತವ್ಯದಲ್ಲಿದ್ದ ಸಬ್ಇನ್ಸ್ಪೆಕ್ಟರ್ಗೆ ಕೊರೊನಾ ಸಾಬೀತಾದ ಬಳಿಕ ಪುನಃ ಮೂವರಿಗೆ ಕೊರೊನಾ ದೃಢಪಟ್ಟಿತ್ತು. ಆದರೆ ಇನ್ಸ್ಪೆಕ್ಟರ್ ತಂಗಿದ್ದ ರೂಂನ್ನು ಸ್ಯಾನಿಟೈಸ್ ಮಾಡಿಸಿರಲಿಲ್ಲ. ಅಲ್ಲದೇ ಇದೇ ಬರಾಕ್ನಲ್ಲಿ ತಂಗಿದ್ದ ಇತರೆ ಪೊಲೀಸರಿಗೂ ಕನಿಷ್ಠ ಸುರಕ್ಷತೆಯ ಮಾನದಂಡಗಳನ್ನೂ ಪಾಲಿಸಿರಲಿಲ್ಲ. ಮಾಸ್ಕ್, ಸ್ಯಾನಿಟೈಸರ್ನ್ನು ಕೂಡಾ ಪೂರೈಸಿರಲಿಲ್ಲ. ಇದರಿಂದಾಗಿ ಆಕ್ರೋಶಗೊಂಡ ಪೊಲೀಸ್ ಪೇದೆಗಳು ಡಿಸಿಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದರು.
ಈ ಸಂದರ್ಭದಲ್ಲಿ ಡಿಸಿಪಿ ಎನ್ ಪೌಲ್ ಹಾಗೂ ಪೇದೆಗಳ ನಡುವೆ ಮಾತಿಗೆ ಮಾತು ಬೆಳೆದಿದ್ದು ಪೇದೆಗಳು ಡಿಸಿಪಿ ಮೇಲೆ ಹಲ್ಲೆ ಮಾಡಿದ್ದಾರೆ. ಮರಣಾಂತಿಕವಾಗಿ ಹಲ್ಲೆಗೊಳಗಾದ ಡಿಸಿಪಿಯನ್ನು ಕೆಲ ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಕೋಲ್ಕತಾ ಪೊಲೀಸ್ ವರಿಷ್ಠಾಧಿಕಾರಿ ಈ ಕುರಿತಾಗಿ ಮಾಹಿತಿ ನೀಡಿ, ಮಾತಿಗೆ ಮಾತು ಬೆಳೆದು ಪೇದೆಗಳು ಡಿಸಿಪಿ ಪೌಲ್ ಮೇಲೆ ಹಲ್ಲೆ ಮಾಡಿದ್ದಾರೆ. ಪೇದೆಗಳಿಂದ ತಪ್ಪಿಸುವ ಯತ್ನ ಪೌಲ್ ಮಾಡಿದರೂ ಕೂಡಾ ಪೇದೆಗಳು ಬೆನ್ನಟ್ಟಿ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಘಟನೆ ನಡೆದ ಸ್ಥಳಕ್ಕೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಭೇಟಿ ನೀಡಿ ಸಮಾಧಾನ ಪಡಿಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.