ಬೆಂಗಳೂರು, ಮೇ 21 (Daijiworld News/MB) : ಅಹವಾಲು ಸಲ್ಲಿಸಲು ಬಂದಿದ್ದ ರೈತ ಮಹಿಳೆಯನ್ನು ನಿಂದಿಸಿದ ಸಚಿವ ಮಾಧುಸ್ವಾಮಿಯವರ ದುರ್ವರ್ತನೆ ಅಕ್ಷಮ್ಯ.ಅವರನ್ನು ಸಂಪುಟದಿಂದ ಕೈ ಬಿಟ್ಟು ಸರ್ಕಾರದ ಮಾನ ಉಳಿಸಬೇಕು ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಅಹವಾಲು ಸಲ್ಲಿಸಲು ಬಂದಿದ್ದ ಅನ್ಯಾಯಕ್ಕೊಳಗಾಗಿರುವ ರೈತ ಮಹಿಳೆಯನ್ನು ನಿಂದಿಸಿದ ಸಚಿವ ಮಾಧುಸ್ವಾಮಿಯವರ ದುರ್ವರ್ತನೆ ಅಕ್ಷಮ್ಯ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಕ್ಷಣ ಸಚಿವರು, ಆ ರೈತ ಮಹಿಳೆಯ ಕ್ಷಮೆ ಯಾಚಿಸುವಂತೆ ಮಾಡಿ, ಅವರನ್ನು ಸಂಪುಟದಿಂದ ಕೈ ಬಿಟ್ಟು ಸರ್ಕಾರದ ಮಾನ ಉಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬುಧವಾರ ಕೋಲಾರದಲ್ಲಿ ಕೆ.ಸಿ.ವ್ಯಾಲಿ ವೀಕ್ಷಣೆಗೆ ಬಂದಿದ್ದ ಸಚಿವ ಮಾಧುಸ್ವಾಮಿ ಅವರ ಬಳಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷೆ ನಳಿನಿ ಅವರು ಕೆರೆ ಒತ್ತುವರಿ ತೆರವು ಕುರಿತು ಮಾತನಾಡಿದ್ದು ಈ ಸಂದರ್ಭದಲ್ಲಿ ಏಕಾಏಕಿಯಾಗಿ ಅವರ ಮೇಲೆ ಆಕ್ರೋಶಗೊಂಡ ಕಾನೂನು ಸಂಸಧೀಯ ಹಾಗೂ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ "ಒತ್ತುವರಿ ತೆರವು ಬಗ್ಗೆ ನನಗೇಕೆ ಕೇಳ್ತಿಯಾ? ನಾನು ಭಾರಿ ಕೆಟ್ಟ ಮನುಷ್ಯ ಬಾಯಿ ಮುಚ್ಚು" ಎಂದು ಬೈದು ಅವಾಚ್ಯ ಶಬ್ಧ ಬಳಕೆ ಮಾಡಿದ್ದರು.