ಮಡಿಕೇರಿ, ಮೇ 21 (DaijiworldNews/PY) : ಕ್ಷುಲ್ಲಕ ಕಾರಣಕ್ಕಾಗಿ ತಾಯಿಯೊಂದಿಗೆ ಜಗಳವಾಡಿದ ಅಣ್ಣನನ್ನೇ ತಮ್ಮನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಬಿಳಗುಂದದಲ್ಲಿ ನಡೆದಿದೆ.
ಹತ್ಯೆಯಾಗಿರುವ ವ್ಯಕ್ತಿಯನ್ನು ಬಿಳಗುಂದದ ಸುರೇಶ್ (48) ಎನ್ನಲಾಗಿದೆ. ಹತ್ಯೆ ಮಾಡಿರುವ ಆರೋಪಿಯನ್ನು ಕುಮಾರ್ ಗುರುತಿಸಲಾಗಿದೆ.
ಸುರೇಶ್ ಹಾಗೂ ಕುಮಾರ್ ಇಬ್ಬರು ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳಾಗಿದ್ದು, ಮದ್ಯದ ಅಮಲಿನಲ್ಲಿ ಕುಮಾರ್ ಸುರೇಶ್ನನ್ನು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.
ಕುಮಾರ್ನ ತಾಯಿಯೊಂದಿಗೆ ಸುರೇಶ್ ಕ್ಷುಲ್ಲಕ ಕಾರಣಕ್ಕೆ ಜಗಳವಾಡುತ್ತಿದ್ದ. ಈ ಸಂದರ್ಭ ಮದ್ಯದ ಅಮಲಿನಲ್ಲಿದ್ದ ಕುಮಾರ್ ಏಕಾಏಕಿ ಮನೆಯಿಂದ ಗನ್ ತಂದು ಸುರೇಶ್ನ ಎದೆಗೆ ಗುಂಡಿಕ್ಕಿದ್ದಾನೆ. ಗುಂಡಿಕ್ಕಿದ ಪರಿಣಾಮ ಗುಂಡು ಎದೆಗೆ ಹೊಕ್ಕಿದ್ದು ಸುರೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಆದರೆ, ಈ ವಿಚಾರವನ್ನು ತಿಳಿಯದೇ ಸುರೇಶ್ನ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿತ್ತು.
ಆದರೆ, ಅಣ್ಣನಿಗೆ ಗುಂಡಿಕ್ಕಿ ಹತ್ಯೆಗೈದ ಕುಮಾರ್ ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ವಿರಾಜಪೇಟೆ ಪೊಲೀಸರು ಧಾವಿಸಿದ್ದು, ಪರಿಶೀಲನೆ ನಡೆಸಿದ್ದು, ಆರೋಪಿಯ ಬಂಧನಕ್ಕಾಗಿ ಬಲೆ ಬೀಸಿದ್ದರು.
ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡ ವಿರಾಜಪೇಟೆ ಪೊಲೀಸರು, ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದು, ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.