ಬೆಂಗಳೂರು, ಮೇ 21 (DaijiworldNews/PY) : ಅವಾಚ್ಯ ಶಬ್ದಗಳಿಂದ ಮಹಿಳೆಯನ್ನು ನಿಂದನೆ ಮಾಡಿರುವ ಸಚಿವ ಜೆ.ಸಿ. ಮಾಧುಸ್ವಾಮಿ ಅವರನ್ನು ಕರೆದು ನಾನು ಎಚ್ಚರಿಕೆ ನೀಡುತ್ತೇನೆ ಎಂದು ಸಿಎಂ ಬಿಎಸ್ವೈ ಅವರು ಹೇಳಿದರು.
ಗೋವಿಂದರಾಜನಗರ ವಾರ್ಡ್ ನಲ್ಲಿ ರೆಫರಲ್ ಆಸ್ಪತ್ರೆ ಮತ್ತು ಅಗ್ರಹಾರ ದಾಸರಹಳ್ಳಿ ವಾರ್ಡ್ ನಲ್ಲಿ 200 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಯಾರೂ ಕೂಡಾ ಮಹಿಳೆಯರ ಬಗ್ಗೆ ಕೇವಲವಾಗಿ ಮಾತನಾಡಬಾರದು. ಓರ್ವ ಸಚಿವರಾಗಿ ಮಾಧುಸ್ವಾಮಿ ಅವರು ಈ ರೀತಿಯಾಗಿ ಮಾತನಾಡಿದ್ದು ಸರಿಯಲ್ಲ. ಅವರನ್ನು ಕರೆದು ನಾನು ವಾರ್ನ್ ಮಾಡುತ್ತೇನೆ. ಅಲ್ಲದೇ, ನೊಂದಿರುವ ಮಹಿಳೆಯನ್ನೂ ಕರೆದು ಮಾತನಾಡಿಸುತ್ತೇನೆ ಎಂದು ತಿಳಿಸಿದರು.