ನವದೆಹಲಿ, ಮೇ 21 (Daijiworld News/MB) : ಅಂಫಾನ್ ಚಂಡಮಾರುತ ಆರ್ಭಟಕ್ಕೆ ಒಡಿಶಾ, ಪಶ್ಚಿಮ ಬಂಗಾಳ ತತ್ತರಿಸಿದ್ದು ಕೋಲ್ಕತ್ತಾ ಏರ್ಪೋರ್ಟ್ನಲ್ಲಿ ಪ್ರವಾಹ ಸಂಭವಿಸಿದೆ.
ಅಂಫಾನ್ ಚಂಡಮಾರುತಕ್ಕೆ ಪಶ್ಚಿಮ ಬಂಗಾಳದಲ್ಲಿ 12 ಮಂದಿ, ಒಡಿಶಾದಲ್ಲಿ ಇಬ್ಬರು ಬಲಿಯಾಗಿದ್ದಾರೆ. ಇನ್ನು ಬಾಂಗ್ಲದೇಶದಲ್ಲಿ 10 ಜನರು ಅಂಫಾನ್ಗೆ ಬಲಿಯಾಗಿದ್ದಾರೆ.
ಬರೋಬ್ಬರಿ 190 ಕಿ. ಮೀ. ವೇಗದ ಈ ಚಂಡಮಾರುತದಿಂದಾಗಿ ಪಶ್ಚಿಮ ಬಂಗಾಳ, ಒಡಿಶಾದಲ್ಲಿ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ್ದು ಭೂ ಕುಸಿತದಿಂದಾಗಿ ಮನೆಗಳು ನೆಲಕಚ್ಚಿದೆ.
ಕೊರೊನಾ ವೈರಸ್ಗಿಂತ ಭಯಂಕರವಾಗಿರುವ ಅಂಫಾನ್ ಚಂಡಮಾರುತದಿಂದಾಗಿ ಪಶ್ಚಿಮ ಬಂಗಾಳ ಒಂದು ರಾಜ್ಯದಲ್ಲೇ 1 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಇನ್ನು ಒಡಿಶಾದ ಬಳಸೋರೆಯಲ್ಲಿ ಈ ಅಂಫಾನ್ ಚಂಡಮಾರುತದ ತೀವ್ರತೆ ಕಡಿಮೆಯಾಗಿದ್ದು ಭಾರೀ ಮಳೆ ಸುರಿದ ಮರುದಿನವೇ ಕೆಲವೊಂದು ಅಂಗಡಿಗಳು ತೆರೆದು ವ್ಯಾಪಾರ ನಡೆಸುತ್ತಿದ್ದವು ಎಂದು ವರದಿಯಾಗಿದೆ.