ತುಮಕೂರು, ಮೇ 21 (DaijiworldNews/PY) : ನನ್ನನ್ನೇನು ಸಿದ್ದರಾಮಯ್ಯ ಅವರು ಮಂತ್ರಿ ಮಾಡಿಲ್ಲ. ಸ್ವಾಭಿಮಾನ ನನಗೂ ಇದೆ. ಸಚಿವ ಸ್ಥಾನವನ್ನು ನಮ್ಮ ಪಕ್ಷದ ನಾಯಕರು ಬಿಡಿ ಎಂದರೆ ಒಂದು ಕ್ಷಣವೂ ಇರುವುದಿಲ್ಲ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಈ ಬಗ್ಗೆ ಮಾತನಾಡಿದ ಅವರು, ರಾಸ್ಕಲ್ ಎಂದು ಹೇಳಿರುವ ಬಗ್ಗೆ ಇಡೀ ಹೆಣ್ಣು ಮಕ್ಕಳ ಭಾವನೆಗೆ ನೋವು ಆಗಿದ್ದರೆ ಕ್ಷಮೆ ಯಾಚಿಸುತ್ತೇನೆ. ಆದರೆ, ಆ ಮಹಿಳೆ ಅನಗತ್ಯವಾಗಿ ಪದೇ ಪದೇ ಮಾತನಾಡುತ್ತಿದ್ದಳು. ನಾನು ಆಕೆಗೆ ಬೈದ ನಂತರ ಆಕೆ ಅಣ್ಣ ಅಂದಿದ್ದು. ಇದಕ್ಕಿಂತ ಮೊದಲು ಅವರ ವರ್ತನೆ ಉದ್ದಟತನವಾಗಿತ್ತು ಎಂದು ತಿಳಿಸಿದರು.
ಸ್ವಾಭಿಮಾನ ನನಗೂ ಇದೆ. ಸಿಟ್ಟು ಬಂದ ಸಂದರ್ಭ ಮಾತನಾಡಿದ್ದೇನೆ. ಆದರೆ, ಆಕೆಯ ವರ್ತನೆಯ ಬಗ್ಗೆಯೂ ನೀವು ಯೋಚಿಸಬೇಕು. ಓರ್ವ ಮಂತ್ರಿಯಾಗಿ ಆ ಮಟ್ಟಕ್ಕೆ ಮಾತಾನಾಡುತ್ತೇನೆ ಎಂದರೆ ಆ ಮಹಿಳೆಯ ವರ್ತನೆ ಹೇಗಿತ್ತು ಎಂಬುದರ ಬಗ್ಗೆ ಯೋಚನೆ ಮಾಡಿ. ಈ ಘಟನೆ ನಡೆಯಬಾರದಿತ್ತು. ನನಗೂ ಬೇಸರವಾಗಿದೆ ಎಂದು ಹೇಳಿದರು.