ಲಖನೌ, ಮೇ 21 (Daijiworld News/MB) : ಉತ್ತರಪ್ರದೇಶ ಕಾಂಗ್ರೆಸ್ನ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ರಾಯ್ಬರೇಲಿ ಕ್ಷೇತ್ರದ ಶಾಸಕಿ ಅದಿತಿ ಸಿಂಗ್ ಅವರನ್ನು ಕಾಂಗ್ರೆಸ್ ಅಮಾನತು ಮಾಡಿದ್ದು ಪಕ್ಷದ ವಿರುದ್ಧ ಅಶಿಸ್ತು ತೋರಿದ್ದರಿಂದಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪಕ್ಷ ತಿಳಿಸಿದೆ.
ಅದಿತಿ ಅವರು, "ಉತ್ತರ ಪ್ರದೇಶದ ಗಡಿಯಲ್ಲಿ 1,000ಕ್ಕೂ ಅಧಿಕ ಬಸ್ಗಳನ್ನು ನಿಲ್ಲಿಸಲಾಗಿದ್ದು ಬುಧವಾರ ಸಂಜೆ 4 ಗಂಟೆ ವರೆಗೂ ಈ ಬಸ್ಗಳು ಅದೇ ಸ್ಥಳಗಳಲ್ಲಿ ಇರುತ್ತವೆ. ಅವುಗಳಲ್ಲಿ ವಲಸೆ ಕಾರ್ಮಿಕರನ್ನು ಕರೆತನ್ನಿ" ಎಂದು ಹೇಳಿದ್ದ ಪ್ರಿಯಾಂಕಾ ಗಾಂಧಿ ವಿರುದ್ಧವಾಗಿ ಹರಿಹಾಯ್ದಿದ್ದು, "ಈ ಸಂಕಷ್ಟದ ಸಮಯದಲ್ಲೂ ಈ ಕೀಳು ಮಟ್ಟದ ರಾಜಕೀಯದ ಅಗತ್ಯವೇನಿದೆ? ಅವರು 1000 ಬಸ್ಗಳ ಪಟ್ಟಿ ನೀಡಿದ್ದಾರೆ. ಆ ಪೈಕಿ ಅರ್ಧಕ್ಕಿಂತಲೂ ಅಧಿಕ ಬಸ್ಗಳ ನೋಂದಣಿ ಸಂಖ್ಯೆ ನಕಲಿ. 297 ಬಸ್ಗಳು ಸಂಚಾರಕ್ಕೆ ಉಪಯುಕ್ತವಲ್ಲದ್ದು. 98 ಆಟೋ ರಿಕ್ಷಾಗಳು ಮತ್ತು ಆ್ಯಂಬುಲೆನ್ಸ್ನಂತಹ ವಾಹನಗಳು. ಇನ್ನು 68 ವಾಹನಗಳಿಗೆ ಪತ್ರವೇ ಇಲ್ಲ. ಇದು ಎಂಥಾ ಕ್ರೂರವಾದ ಹಾಸ್ಯ. ಬಸ್ಸುಗಳು ಇದ್ದಲ್ಲಿ ಅವುಗಳನ್ನು ರಾಜಸ್ಥಾನ, ಪಂಜಾಬ್ ಮತ್ತು ಮಹಾರಾಷ್ಟ್ರಕ್ಕೆ ಯಾಕೆ ಕಳುಹಿಸಲಿಲ್ಲ?" ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದರು.
ಈ ಬೆನ್ನಲ್ಲೇ ಅದಿತಿ ಅವರನ್ನು ಉತ್ತರಪ್ರದೇಶ ಕಾಂಗ್ರೆಸ್ನ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಅಮಾನತು ಮಾಡಲಾಗಿದೆ.
ಇನ್ನು ಅವರು ಪಕ್ಷದ ನಿರ್ಧಾರದ ವಿರುದ್ಧವಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೊಂದಿಗೆ ಸಭೆ ನಡೆಸಿದ್ದು ವಿಧಾನಸಭೆ ಅಧಿವೇಶನದಲ್ಲಿ ಭಾಗವಹಿಸಿದ್ದರು. ಈ ಕಾರಣದಿಂದಾಗಿ ಈ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.