ಬೆಂಗಳೂರು, ಮೇ 21 (Daijiworld News/MB) : ಈ ಮೊದಲು ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದ ನಂಜನಗೂಡಿನಲ್ಲಿರುವ ಜುಬಿಲೆಂಟ್ ಜೆನೆರಿಕ್ ಔಷಧ ತಯಾರಿಕಾ ಕಂಪನಿ ಪುನರಾರಂಭಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಈ ಕಂಪೆನಿಯು, ನಾವು ಕೊರೊನಾ ಚಿಕಿತ್ಸೆಗಾಗಿ ಬಳಸುವ ಔಷಧ ಸೇರಿದಂತೆ ಜೀವ ರಕ್ಷಕವಾಗಿರುವ 46 ಬಗೆಯ ಅತ್ಯಾವಶ್ಯಕ ಔಷಧಗಳನ್ನು ತಯಾರಿಸುತ್ತದೆ. ದೇಶ ವಿದೇಶಗಳಲ್ಲಿ ವ್ಯಾಪಕವಾದ ಬೇಡಿಕೆಯಿದೆ. ಅಝಿಥ್ರೊಮೈಸಿನ್, ಲೋರ್ಸಾತನ್, ವಲ್ಸತ್ರಾನ್, ಇಬ್ರೆಸ್ರಾತನ್, ಕಾರ್ಬಮಜೆಪೈನ್ ಮಾತ್ರವಲ್ಲದೇ ಕೊರೊನಾ ಚಿಕಿತ್ಸೆಗಾಗಿ ಬಳಸಲಾಗುವ ಅಝಿಥ್ರೊಮೈಸಿನ್ ಡೈಹೈಡ್ರೇಟ್ ಮತ್ತು ಅಝಿಥ್ರೊಮೈಸಿನ್ ಮೊನೊಹೈಡ್ರೇಟ್ ಅನ್ನು ಕೂಡಆ ತಯಾರಿಸುತ್ತೇವೆ. ಆ ನಿಟ್ಟಿನಲ್ಲಿ ಕಂಪೆನಿಯು ಸರ್ಕಾರಕ್ಕೆ ಮನವಿ ಮಾಡಿದ್ದು ಇದೀಗ ಸರ್ಕಾರ ಈ ಔಷಧಿ ತಯಾರಿಕಾ ಕಂಪೆನಿಯನ್ನು ತೆರೆಯಲು ಅನುಮತಿ ನೀಡಿದೆ.
ಇನ್ನು ಈ ಸಂಸ್ಥೆಯು, ಔಷಧ ತಯಾರಿಕಾ ಘಟಕ ಪುನರಾರಂಭಕ್ಕೆ ಎಲ್ಲಾ ಸಿದ್ಧತೆ ಮಾಡಲಾಗಿದ್ದು ಸೋಂಕು ನಿವಾರಕಗಳನ್ನು ಬಳಸಿ ಸ್ವಚ್ಛ ಮಾಡಲಾಗಿದೆ. ಸರ್ಕಾರ ಸೂಚಿಸಿರುವ ಮಾರ್ಗಸೂಚಿಯನ್ನು ಚಾಚೂ ತಪ್ಪದೆ ಪಾಲಿಸಲಾಗುತ್ತಿದೆ ಎಂದು ಹೇಳಿದೆ.
ರಾಜ್ಯದಲ್ಲಿ ಸೋಂಕು ಪ್ರಕರಣಗಳು ಆರಂಭವಾದ ವೇಳೆ ಜುಬಿಲೆಂಟ್ನಲ್ಲಿ ಓರ್ವರಿಗೆ ಕೊರೊನಾ ದೃಢಪಟ್ಟಿದ್ದು ಈ ಕಂಪೆನಿಯ ಹಲವರಿಗೆ ಸೋಂಕು ತಗುಲಿತ್ತು. ಆದರೆ ಈ ಪ್ರಕರಣದ ಮೂಲ ಇನ್ನೂ ತಿಳಿದು ಬಂದಿಲ್ಲ ಎಂದು ವರದಿಯಾಗಿದೆ.