ಹಾಸನ, ಮೇ 21 (DaijiworldNews/PY) : ಯಾವ ಟಿವಿ ನೋಡಿದರೂ ಪ್ರಧಾನಿ ನರೇಂದ್ರ ಮೋದಿ, ಬಿ.ಎಸ್.ಯಡಿಯೂರಪ್ಪ ಅವರೇ ಬರುತ್ತಾರೆ. ಸಿಎಂ ಬಿಎಸ್ವೈ ಅವರ ಮುಖ ನೋಡಿ ನೋಡಿ ನಮಗೂ ಸಾಕಾಗಿ ಹೋಗಿದೆ ಎಂದು ಎಂದು ಹಾಸನದಲ್ಲಿ ಮಾಜಿ ಸಚಿವ ರೇವಣ್ಣ ವ್ಯಂಗ್ಯ ಮಾಡಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಮೊದಲಿನಿಂದಲೂ ನಮ್ಮ ಹಾಸನ ಜಿಲ್ಲೆಯನ್ನು ಹಸಿರು ವಲಯವಾಗಿ ಕಾಪಾಡಿಕೊಂಡು ಬಂದಿದ್ದು, ಈ ಕಾರ್ಯದಲ್ಲಿ ನಮ್ಮ ಜಿಲ್ಲೆಯ ಅಧಿಕಾರಿಗಳ ಶ್ರಮವೂ ಇದೆ. ಆದರೆ, ಮುಂಬೈನಿಂದ ಆಗಮಿಸಿದವರನ್ನು ರಾಜ್ಯ ಸರ್ಕಾರವು ತಪಾಸಣೆ ಮಾಡದೆಯೇ ಕರೆತಂದ ಕಾರಣ ಇಂದು ನಮ್ಮ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಜಾಸ್ತಿಯಾಗಿವೆ. ಬಿಎಸ್ವೈ ಅವರು ಪ್ರತಿನಿತ್ಯ ಮೊದಲ ಪೇಜ್ಗಾಗಿ ಹಣ ವ್ಯಯ ಮಾಡುವ ಬದಲು, ಬೇರೆ ಕಾರ್ಯಗಳಿಗಾಗಿ ವಿನಿಯೋಗ ಮಾಡಲಿ ಎಂದರು.
ಹಾಸನಕ್ಕೆ ಮುಂಬೈನಿಂದ ಬರುವುದು ಬೇಡ ಎಂದು ಹೇಳುವುದಿಲ್ಲ. ಆದರೆ ಬರುವ ಸಂದರ್ಭ ಜೊರೊನಾ ಟೆಸ್ಟ್, ಚಿಕಿತ್ಸೆ ಪಡೆದುಕೊಂಡು ಬರಲಿ. ಇಂದು ಹೊಸ 13 ಪ್ರಕರಗಳು ಬಂತಂತೆ. ಈ ಪೈಕಿ ಮೂರು ಸೀರಿಯಸ್ ಅಂತೆ ಎಂದು ಹೇಳಿದರು.
ಹಾಸನ ಜಿಲ್ಲೆಯಲ್ಲಿ ಬುಧವಾರವಷ್ಟೇ 21 ಕೊರೊನಾ ಪ್ರಕರಣಗಳು ಕಂಡುಬಂದಿದ್ದು, ಇದರೊಂದಿಗೆ ಇಂದು 13 ಪ್ರಕರಣಗಳು ಬಂದಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 66ಕ್ಕೇರಿದೆ. ಇನ್ನು ಚನ್ನರಾಯಪಟ್ಟಣ ತಾಲೂಕಿನಲ್ಲಿ ಹೆಚ್ಚು ಕೊರೊನಾ ಪ್ರಕರಣಗಳ ದಾಖಲಾಗಿದೆ. ಅವರೆಲ್ಲರನ್ನೂ ಕ್ವಾರಂಟೈನ್ನಲ್ಲಿ ಇಟ್ಟಿರುವ ಕಾರಣದಿಂದ ಜಿಲ್ಲೆಯಲ್ಲಿಜನತೆ ನಿಟ್ಟುಸಿರು ಬಿಡುವಂತಾಗಿದೆ.