ಪಾಟ್ನ, ಮೇ 21 (Daijiworld News/MB) : ಅನಾರೋಗ್ಯಕ್ಕೆ ಒಳಗಾಗಿರುವ ತನ್ನ ತಂದೆಯನ್ನು 15 ವರ್ಷದ ಬಾಲಕಿ ಚಿಕಿತ್ಸೆಗೆಂದು ಹರ್ಯಾಣದ ಗುರುಗ್ರಾಮ್ನಿಂದ ಬಿಹಾರದ ದರ್ಬಾಂಗಗೆ ಸೈಕಲ್ನಲ್ಲೇ ಕರೆತರುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ.
ದೂರದ ಗುರುಗ್ರಾಮ್ನಿಂದ ತಂದೆ ಮೋಹನ್ ಪಾಸ್ವಾನ್ನನ್ನು ಸೈಕಲ್ನಲ್ಲೇ ಕರೆತಂದ ಕಾರಣದಿಂದಾಗಿ 8ನೇ ತರಗತಿಯ ಜ್ಯೋತಿಯನ್ನು ಊರಿನಲ್ಲಿ ಶ್ರವಣ ಕುಮಾರಿ ಎಂದೇ ಕರೆಯಲಾಗುತ್ತಿದ್ದು, ಈ ಬಾಲಕಿಯ ವಿಷಯ ತಿಳಿದ ದರ್ಬಾಂಗ ಜಿಲ್ಲಾಧಿಕಾರಿ ಡಾ ತ್ಯಾಗರಾಜನ್ ಎಸ್ ಎಂ ಅಧಿಕಾರಿಯೊಬ್ಬರನ್ನು ಆಕೆಯ ಮನೆಗೆ ಕಳುಹಿಸಿ ಆಕೆಯ ಶಿಕ್ಷಣಕ್ಕೆ ಸಹಾಯ ಮಾಡುವ ಭರವಸೆ ನೀಡಿದ್ದಾರೆ.
ಇನ್ನು ತಾನು ತಂದೆಯನ್ನು ಸೈಕಲ್ನಲ್ಲೇ 1,200 ಕಿ.ಮೀ ಪ್ರಯಾಣಿಸಿ ಕರೆದುಕೊಂಡು ಬಂದಿರುವ ಬಗ್ಗೆ ಮಾತನಾಡಿದ ಜ್ಯೋತಿ, "ದೇವರನ್ನು ನೆನೆಸಿಕೊಂಡು ಪ್ರಯಾಣ ಆರಂಭಿಸಿದೆ. ಏಳು ದಿನದಲ್ಲಿ ಗುರುಗ್ರಾಮ್ನಿಂದ ಬಿಹಾರಕ್ಕೆ ಬಂದೆ. ದಿನಕ್ಕೆ 100ರಿಂದ 150 ಕಿಲೋ ಮೀಟರ್ ಸೈಕಲ್ ತುಳಿದಿದ್ದು ಸುಸ್ತಾದಾಗ ಮುಖಕ್ಕೆ ನೀರು ಚಿಮುಕಿಸಿ ನೀರು ಕುಡಿದು ವಿಶ್ರಾಂತಿ ಪಡೆಯುತ್ತಿದೆ ಎಂದು ಹೇಳಿದ್ದಾಳೆ.
ತಂದೆ ನನ್ನ ಮೇಲೆ ಇಟ್ಟ ನಂಬಿಕೆಯಿಂದಾಗಿ ನನಗೆ ಇಷ್ಟು ದೂರ ಸೈಕಲ್ನಲ್ಲೇ ಪ್ರಯಾಣ ಮಾಡಲು ಸಾಧ್ಯವಾಗಿದೆ. ಬರುವ ಹಾದಿಯಲ್ಲಿ ನಮ್ಮನ್ನು ನೋಡಿದ ಕೆಲವರು ಆಹಾರ, ನೀರು ನೀಡಿದ್ದಾರೆ. ಒಂದೆರಡು ದಿನ ಆಹಾರವಿಲ್ಲದೆ ಇದ್ದ ಆಹಾರ ತಂದೆಗೆ ನೀಡಿ ಪ್ರಯಾಣ ಮುಂದುವರೆಸ ಬೇಕಾಗಿತ್ತು ಎಂದು ಹೇಳುತ್ತಾಳೆ ಶ್ರವಣ ಕುಮಾರಿ ಎಂದೇ ಕರೆಯಲ್ಪಡುವ ಜ್ಯೋತಿ.