ಬೆಂಗಳೂರು, ಮೇ 21 (Daijiworld News/MSP): ಕೊರೊನಾ ಕಾರಣದಿಂದ ಶಿಕ್ಷಣ ವ್ಯವಸ್ಥೆ , ವ್ಯಾಪಾರ, ಉದ್ಯೋಗ ಹೀಗೆ ಎಲ್ಲವೂ ನಿಧಾನಗತಿಯಲ್ಲಿ ಆನ್ ಲೈನ್ ಗೆ ಬದಲಾವಣೆ ಹೊಂದುತ್ತಿದೆ. ಇದೀಗ ದೇವಸ್ಥಾನಗಳಲ್ಲಿಆನ್ ಲೈನ್ ಪೂಜೆ ಮಾಡಲು ಭಕ್ತರಿಗೆ ಅವಕಾಶ ನೀಡಲು ಸರಕಾರ ಚಿಂತನೆ ನಡೆಸಿದೆ.
ಕೊರೊನಾ ಲಾಕ್ ಡೌನ್ ನಿಂದ ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ಧಾರ್ಮಿಕ ಚಟುವಟಿಕೆಗಳು ಸ್ಥಗಿತಗೊಂಡಿದೆ. ಅಲ್ಲದೆ ಹಲವು ಧಾರ್ಮಿಕ ಕಾರ್ಯಕ್ರಮ, ಜಾತ್ರಾಮಹೋತ್ಸವ, ಯಾಗ -ಹೋಮಗಳನ್ನು ಮುಂದೂಡಲಾಗಿದೆ. ಇದಲ್ಲದೆಭಕ್ತರಿಗೆ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಲು ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಲಾಕ್ ಡೌನ್ ನಾಲ್ಕನೇ ಹಂತದಲ್ಲಿ ನಿಗದಿತ ಕೆಲವು ದೇವಸ್ಥಾನಗಳಲ್ಲಿ ಆನ್ ಲೈನ್ ಪೂಜೆಗೆ ಅವಕಾಶ ಕಲ್ಪಿಸಲು ಸರಕಾರ ಚಿಂತನೆ ನಡೆಸಿದೆ.
ಈ ಬಗ್ಗೆ ಮಾಹಿತಿ ನೀಡಿದ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ದೇವಾಲಯಗಳಲ್ಲಿ ಆನ್ ಲೈನ್ ಪೂಜೆಗೆ ಅವಕಾಶ ಕಲ್ಪಿಸಲು ನಿರ್ಧರಿಸಿದ್ದು ಮೇ 26ರಿಂದ ಅವಕಾಶ ನೀಡಲಾಗುವುದು ಭಕ್ತರು ಆನ್ ಲೈನ್ ಮೂಲಕ ಹಣ ಪಾವತಿಸಿ ತಮ್ಮ ಹೆಸರಿನಲ್ಲಿ 20 ಸೇವೆ ಪೂಜೆ ಮಾಡಿಸಬಹುದು ಎಂದರು.
ಸರ್ಕಾರ ಈ ಬಗ್ಗೆ ಶೀಘ್ರವೇ ಆದೇಶ ಹೊರಡಿಸುವ ನಿರೀಕ್ಷೆ ಇದ್ದು ರಾಜ್ಯದ ಪ್ರಮುಖ ದೇವಸ್ಥಾನಗಳಾದ ಕಟೀಲು ದುರ್ಗಾಪರಮೇಶ್ವರಿ, ಕುಕ್ಕೆ ಸುಬ್ರಹ್ಮಣ್ಯ, ಮೈಸೂರು ಚಾಮುಂಡೇಶ್ವರಿ, ಬನಶಂಕರಿ ಸೇರಿದಂತೆ 50 ದೇವಾಲಯಗಳಲ್ಲಿ ಅವಕಾಶ ನೀಡಲಾಗುವುದು ಎಂದರು.