ನವದೆಹಲಿ, ಮೇ 21 (Daijiworld News/MSP): ರಾಮಜನ್ಮಭೂಮಿಯಲ್ಲಿ ಉತ್ಖನನ ಹಾಗೂ ನೆಲಸಮಗೊಳಿಸುವ ಕೆಲಸವು ಪ್ರಗತಿಯಲ್ಲಿದ್ದು, ಈ ವೇಳೆಯಲ್ಲಿ ರಾಮ ಮಂದಿರ ಹಾಗೂ ವಿಗ್ರಹದ ಅವಶೇಷಗಳು ಪತ್ತೆಯಾಗಿವೆ. ಕಳೆದ ವರ್ಷ ಐತಿಹಾಸಿಕ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್ ರಾಮಮಂದಿರ ನಿರ್ಮಿಸಲು ಆದೇಶ ಹೊರಡಿಸಿತ್ತು. ಈ ಸ್ಥಳದಲ್ಲಿ ಭವ್ಯ ಮಂದಿರಗಳಿದ್ದು, ಮಸೀದಿ ನಿರ್ಮಾಣಕ್ಕಾಗಿ ಆಕ್ರಮಣಕಾರರಿಂದ ಧ್ವಂಸಗೊಂಡಿವೆ ಎಂಬುದಕ್ಕೆ ಇಲ್ಲಿ ಉತ್ಖನನ ವೇಳೆ ಹಲವು ಪುರಾವೆಗಳು ದೊರಕುತ್ತಲೇ ಇವೆ.
ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳು ನಡೆಯುತ್ತಿವೆ. ಕಳೆದ ಹತ್ತು ದಿನಗಳಿಂದ ಇಲ್ಲಿ ನೆಲವನ್ನು ಸಮತಟ್ಟುಗೊಳಿಸಲಾಗುತ್ತಿದೆ. ಈ ವೇಳೆ ಮಂದಿರದ ಅವಶೇಷಗಳ ಜೊತೆಗೆ ವೈವಿಧ್ಯಮಯ ಕಲಾಕೃತಿಗಳು ಹಾಗೂ ಹಲವಾರು ರೀತಿಯ ವಿಗ್ರಹಗಳನ್ನು ಪತ್ತೆ ಹಚ್ಚಲಾಗಿದೆ. ಕಪ್ಪು ಕಲ್ಲಿನ ಏಳು ಕಂಬಗಳು, ಕೆಂಪು ಕಲ್ಲಿನ ಆರು ಕಂಬಗಳು, ಐದು ಅಡಿ ಎತ್ತರದ ಶಿವಲಿಂಗ ಮತ್ತು ಕೆಲ ವಿಗ್ರಹಗಳ ಅವಶೇಷಗಳು ಪತ್ತೆಯಾಗಿವೆ ಮಾತ್ರವಲ್ಲದೆ ಕಂಬಗಳು ಮತ್ತು ಇತರ ವಸ್ತುಗಳ ಭಗ್ನಾವಶೇಷಗಳು ಪತ್ತೆಯಾಗಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ 2019ರ ನವೆಂಬರ್ 9 ರಂದು ನೀಡಿದ ತೀರ್ಪಿನಲ್ಲಿ ಪುರಾತತ್ವ ಇಲಾಖೆಯ 2003ರ ಆವಿಷ್ಕಾರಗಳನ್ನು ಉಲ್ಲೇಖಿಸಿದ್ದು, ಅಲ್ಲಿ ಬಹು ವರ್ಷಗಳ ಹಿಂದೆಯೇ ಅಸ್ತಿತ್ವದಲ್ಲಿದ್ದ ರಚನೆ ಹಾಗೂ ಗೋಡೆಗಳ ಮೇಲೆ ಮಸೀದಿ ನಿರ್ಮಾಣವಾಗಿದೆ ಎಂದು ತೀರ್ಪು ನೀಡಿತ್ತು.