ಲಕ್ನೋ, ಮೇ 22 (DaijiworldNews/PY) : ವಲಸಿಗರಿಗಾಗಿ ಕಾಂಗ್ರೆಸ್ ಬಸ್ ಸೌಲಭ್ಯ ಕಲ್ಪಿಸಲು ಮುಂದೆ ಬಂದಾಗ ಯೋಗಿ ಸರ್ಕಾರ, ಕಾಂಗ್ರೆಸ್ ಮುಖಂಡರನ್ನು ಜೈಲಿಗೆ ಕಳುಹಿಸಿತು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 30ನೇ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶಕ್ಕಾಗಿ ನನ್ನ ತಂದೆ ರಾಜೀವ್ ಗಾಂಧಿ ಅವರು ಪ್ರಾಣ ನೀಡಿದ್ದಾರೆ. ದೇಶದ ಜನರನ್ನು ಅವರು ಪ್ರೀತಿಸುತ್ತಿದ್ದರು. ದುರ್ಬಲರಿಗೆ ನೆರವಾಗಬೇಕು ಎಂಬದನ್ನು ನಾವು ಅವರಿಂದ ಕಲಿತಿದ್ದೇವೆ ಎಂದು ತಿಳಿಸಿದರು.
ಬಿಜೆಪಿ ನೇತೃತ್ವದ ಯುಪಿ ಸರ್ಕಾರ ಮತ್ತು ಕಾಂಗ್ರೆಸ್ ಮಧ್ಯೆ ವಲಸಿಗ ಕಾರ್ಮಿಕರಿಗೆ 1 ಸಾವಿರ ಬಸ್ಸುಗಳನ್ನು ಒದಗಿಸುವ ಪ್ರಸ್ತಾಪದ ಕುರಿತು ಭಿನ್ನಾಭಿಪ್ರಾಯ ಉಂಟಾಗಿದ್ದು, ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಮುಖ್ಯಸ್ಥ ಅಜಯ್ ಕುಮಾರ್ ಲಲ್ಲು ಅವರು ಬುಧವಾರದಂದು ಎರಡು ಬಾರಿ ಬಂಧನಕ್ಕೊಳಗಾಗಿದ್ದಾರೆ.
ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಪ್ರಿಯಾಂಕ ಗಾಂಧಿ, ವಲಸೆ ಕಾರ್ಮಿಕರಿಗಾಗಿ ರೈಲು ಟಿಕೆಟ್, ಬಸ್, ಆಹಾರ ಹಾಗೂ ಪಡಿತರ ವ್ಯವಸ್ಥೆ ಮಾಡುವವರನ್ನು ಜೈಲಿಗಟ್ಟುತ್ತಿದೆ ಎಂದು ಆರೋಪಿಸಿದ್ದಾರೆ.
ಇನ್ನು ಪ್ರಿಯಾಂಕ ವಿರುದ್ದ ಟೀಕೆ ಮಾಡಿದ್ದ, ಕಾಂಗ್ರೆಸ್ ಶಾಸಕಿ ಅದಿತಿ ಸಿಂಗ್ ಅವರನ್ನು ಪಕ್ಷವು ಅಮಾನತು ಮಾಡಿದೆ.