ಹೊಸಪೇಟೆ, ಮೇ 22 (DaijiworldNews/PY) : ಮೇ 30ರಂದು ಕೇಂದ್ರದ ಹೊಸ ಮಾರ್ಗಸೂಚಿ ಬರಲಿದೆ. ಅದನ್ನು ನೋಡಿಕೊಂಡು ರಾತ್ರಿ ಬಸ್ ಸಂಚಾರಕ್ಕೆ ಯಾವ ರೀತಿಯಾದ ವ್ಯವಸ್ಥೆ ಮಾಡಬೇಕು ಎನ್ನುವದರ ಬಗ್ಗೆ ನಿರ್ಧಾರಕ್ಕೆ ಬರಲಾಗುವುದು ಎಂದು ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.
ಶುಕ್ರವಾರ ಹೊಸಪೇಟೆಯ ಕೇಂದ್ರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ರಾಜ್ಯದ ಕೆಲವು ಕಡೆ ರಾತ್ರಿ ಬಸ್ ಸಂಚಾರ ಆರಂಭಗೊಂಡಿದೆ. ರಾಜ್ಯಾದ್ಯಂತ ಶೀಘ್ರದಲ್ಲೇ ಪೂರ್ಣ ಪ್ರಮಾಣದಲ್ಲಿ ರಾತ್ರಿ ಬಸ್ಗಳನ್ನು ಓಡಿಸಲಾಗುವುದು ಎಂದರು.
ಸರ್ಕಾರವು ಆಟೋ ಚಾಲಕರಿಗೆ ಘೋಷಣೆ ಮಾಡಿರುವ ಪರಿಹಾರವು ತಾಂತ್ರಿಕ ಕಾರಣದಿಂದ ನಿಂತಿತ್ತು. ಅದನ್ನು ಈಗ ಬಗೆಹರಿಸಲಾಗಿದ್ದು, ಯಾವುದೇ ಷರತ್ತು ಇಲ್ಲದೇ ನೇರವಾಗಿ ಎಲ್ಲಾ ಆಟೋ ಚಾಲಕರ ಖಾತೆಗೆ ಹಣ ಜಮೆ ಮಾಡಲಾಗುವುದು. ಯಾವ ಸರ್ಕಾರಿ ನೌಕರರಿಗೆ ಸದ್ಯ ನಿವೃತಿ ವೇತನವಿಲ್ಲ. ಹಾಗಾಗಿ ನಮ್ಮ ಇಲಾಖೆಯಲ್ಲಿ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದರು.
ಹೊಸಪೇಟೆ ವಿಭಾಗವು ಇಡೀ ರಾಜ್ಯದಲ್ಲೇ ಅತ್ತ್ಯುತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ರಾಜ್ಯದ ಎಲ್ಲಾ ವಿಭಾಗಗಳು ನಷ್ಟದಲ್ಲಿ ಇದ್ದ ಸಂದರ್ಭ ಹೊಸಪೇಟೆ ವಿಭಾಗವು ಲಾಭದ ಹಾದಿಯಲ್ಲಿ ನಡೆಯುತ್ತಿದ್ದು, ಇದು ಎಲ್ಲಾ ಅಧಿಕಾರಿಗಳ ಶ್ರಮದಿಂದ ಸಾಧ್ಯವಾಗಿದೆ. ಈ ವಿಭಾಗದ ಮೇಲೆ ನನಗೂ ಹೆಮ್ಮೆ ಇದೆ ಎಂದರು.