ಬೆಂಗಳೂರು, ಮೇ 22 (DaijiworldNews/PY) : ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ ಮುಂತಾದ ಸಂಗೀತ ಎಲ್ಲಾ ಪ್ರಾಕಾರಗಳಲ್ಲೂ ಅದ್ಭುತ ಗಾಯಕಿ, ಸಂಗೀತ ಸಂಯೋಜಕಿ ಆಗಿದ್ದ ಗಾನ ವಿಶಾರದೆ ಶ್ಯಾಮಲ ಜಿ ಭಾವೆ ಇಂದು ಬೆಳಿಗ್ಗೆ 6.30ಕ್ಕೆ ನಿಧನರಾದರು.
ಶ್ಯಾಮಲಾ ಜಿ.ಭಾವೆ ಅವರ ಪಾರ್ಥಿವ ಶರೀರವನ್ನು ಸ್ವಗೃಹದಲ್ಲಿ ಇರಿಸಲಾಗಿದ್ದು, ಅಂತ್ಯ ಸಂಸ್ಕಾರದ ವಿಧಿ-ವಿಧಾನಗಳು ಚಾಮರಾಜಪೇಟೆ ರುದ್ರಭೂಮಿಯಲ್ಲಿ ನಡೆಯಲಿವೆ. ಜನ ಸೇರುವುದಕ್ಕೆ ನಿರ್ಬಂಧವಿರುವ ಕಾರಣ ಅಭಿಮಾನಿಗಳು ಸಹಕರಿಸಿ ಎಂದು ಕುಟುಂಬದ ಸದಸ್ಯರು ಮನವಿ ಮಾಡಿದ್ದಾರೆ.
ಶ್ಯಾಮಲ ಜಿ ಭಾವೆ ಅವರು 1941 ಮಾರ್ಚ್ 14 ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಆಚಾರ್ಯ ಪಂಡಿತ್ ಗೋವಿಂದ್ ವಿಠಲ್ ಭಾವೆ, ತಾಯಿ ವಿದುಷಿ ಲಕ್ಷ್ಮೀ ಜಿ. ಭಾವೆ. 1930 ರಲ್ಲಿ ಇವರ ತಂದೆ ಗೋವಿಂದ ವಿಠಲ್ ಭಾವೆ ಶೇಷಾದ್ರಿಪುರದ ನೆಹರು ವೃತ್ತದಲ್ಲಿ ಸರಸ್ವತಿ ಸಂಗೀತ ವಿದ್ಯಾಲಯವನ್ನು ಸ್ಥಾಪಿಸಿದರು.
ಶ್ಯಾಮಲ ಅವರು ಆರು ವರ್ಷದವರಿದ್ದಾಗಲೇ ಹಾಡುಗಾರಿಕೆ ಆರಂಭಿಸಿದ್ದರು. ತಂದೆ ಆರಂಭಿಸಿದ ಸಂಗೀತ ಶಾಲೆಯಲ್ಲಿ ಶ್ಯಾಮಲ ಅವರು ಸಂಗೀತಾಭ್ಯಾಸ ಮಾಡಿದ್ದರು. ಇವರು ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತದಲ್ಲಿ ಸಂಪೂರ್ಣ ಹಿಡಿತ ಸಾಧಿಸಿದ್ದರು. ಶ್ಯಾಮಲ ಅವರು 1953ರ ವೇಳೆಗೆ ತಂದೆಯ ಸಂಗೀತ ಶಾಲೆಯ ಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡರು. ಹಿಂದೂಸ್ತಾನಿ ಸಂಗೀತದಲ್ಲಿ ಪರಿಣಿತರಾಗಿರುವ ಕುಟುಂಬದಿಂದ ಬಂದ ಶ್ಯಾಮಲ ಅವರು ಆರು ವರ್ಷದವರಿದ್ದಾಗಲೇ ವೇದಿಕೆಯಲ್ಲಿ ಪ್ರದರ್ಶನ ನೀಡುತ್ತಿದ್ದರು.