ಬೆಂಗಳೂರು, ಮೇ 22(Daijiworld News/MSP): ರಾಜ್ಯದ ಜನತೆ ಬಹಳ ಸಂಕಷ್ಟದಲ್ಲಿ ಇರುವ ಸಮಯದಲ್ಲಿ ಶುಲ್ಕ ಹೆಚ್ಚಳ ಮಾಡಿ ಜನರ ಶೋಷಣೆಗೆ ಯಾವ ಖಾಸಗಿ ಶಾಲೆ ಮುಂದಾಗಬಾರದು ಎಂದು ಸರ್ಕಾರ ಬಹಳ ಹಿಂದೆಯೇ ಸುತ್ತೊಲೆ ಹೊರಡಿಸಿತ್ತು.
ಆದರೆ ಲಾಕ್ ಡೌನ್ ಸಡಿಲಿಕೆ ಮಾಡುತ್ತಿದ್ದಂತೆ ಹಲವು ಖಾಸಗಿ ಶಾಲಾ ಆಡಳಿತ ಮಂಡಳಿ ಸದ್ದಿಲ್ಲದೆ ಶುಲ್ಕ ಹೆಚ್ಚಳ ಮಾಡಿ ಸುಲಿಗೆ ಮಾಡತೊಡಗಿದೆ. ಇಂತಹ ಶಾಲೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಬಿಸಿ ಮುಟ್ಟಿಸಿದ್ದು ಬೆಂಗಳೂರಿನಲ್ಲಿ ಶುಲ್ಕ ಹೆಚ್ಚಳ ಮಾಡಿದ ೧೬೩ ಶಾಲೆಗಳಿಗೆ ಶಿಕ್ಷಣ ಇಲಾಖೆ ನೋಟಿಸ್ ನೀಡಿದೆ.
ಶಿಕ್ಷಣ ಇಲಾಖೆಯ ಸುತ್ತೋಲೆ ಕಡೆಗಣಿಸಿದ ಹಲವು ಶಾಲಾ ಆಡಳಿತ ಮಂಡಳಿ ಶುಲ್ಕವನ್ನು ಹೆಚ್ಚಿಸಿ ಪೋಷಕರ ಸುಲಿಗೆಗೆ ಹೊರಟಿದೆ . ಈ ಬಗ್ಗೆ ಕಳೆದ ೧೦ ದಿನಗಳಿಂದ ೮೦೦ ಕ್ಕೂ ಅಧಿಕ ಶಾಲೆಗಳ ವಿರುದ್ದ ದೂರು ದಾಖಲಾಗಿದ್ದವು.
ಖಾಸಗಿ ಶಾಲೆಗಳು ಮಾನ್ಯ ಮಾಡದೆ ಪೋಷಕರ ಸುಲಿಗೆ ಮಾಡ ಹೊರಟಿರುವುದನ್ನು ಸಹಿಸಲಾಗದು ಎಂದು ನೋಟಿಸ್ ನಲ್ಲಿ ಎಚ್ಚರಿಕೆ ನೀಡಲಾಗಿದೆ.
ನಗರದ ೮೨೯ ಶಾಲೆಗಳ ವಿರುದ್ದ ಶುಲ್ಕ ಹೆಚ್ಚಳದ ಕುರಿತು ಶಿಕ್ಷಣ ಇಲಾಖೆ ಸಹಾಯವಾಣಿಗೆ ಪೋಷಕರಿಂದ ದೂರು ದಾಖಲಾಗಿತ್ತು. ಬೆಂಗಳೂರು ದಕ್ಷಿಣ ಭಾಗದ ೧೧೬ ಬೆಂಗಳೂರು ಉತ್ತರ ಭಾಗದಿಂದ ೪೫ ಹಾಗೂ ಬೆಂಗಳೂರು ಗ್ರಾಮಾಂತರ ಭಾಗದ ೨ ಶಾಲೆಗಳ ವಿರುದ್ದ ದೂರು ಕೇಳಿಬಂದಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉನ್ನತ ಮೂಲಗಳಿಮ್ದ ಮಾಹಿತಿ ಲಭ್ಯವಾಗಿದೆ.