ಯಾದಗಿರಿ, ಮೇ 22 (Daijiworld News/MSP) : ಇಲ್ಲಿನ ರಾಜನಕೊಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕ್ವಾರಂಟೈನ್ ಕೇಂದ್ರದ ಸಿಬ್ಬಂದಿಗಳಿಗೆ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿದ ಪರುತು ನಾಯಕ ತಾಂಡಾದ ವಲಸೆಗಾಗರರ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿವೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ್ ಅವರು ತಿಳಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಾರ್ಗಸೂಚಿ ಹಾಗೂ ಶಿಷ್ಟಾಚಾರದಂತೆ ಹೊರ ರಾಜ್ಯಗಳಿಂದ ಆಗಮಿಸಿದ ವಲಸೆಗಾರರನ್ನು ಕಡ್ಡಾಯವಾಗಿ 14 ದಿನಗಳವರೆಗೆ ಇನ್ಸ್ಟಿಟ್ಯೂಶನಲ್ ಕ್ವಾರಂಟೈನ್ನಲ್ಲಿ ಅವಲೋಕನೆಗಾಗಿ ಇರಿಸಲು ಜಿಲ್ಲಾಡಳಿತವು ಕ್ರಮ ಕೈಗೊಂಡಿದೆ. ಅದರಂತೆ ಮಹಾರಾಷ್ಟ್ರ ರಾಜ್ಯದ ರತ್ನಗಿರಿ ಜಿಲ್ಲೆ ಹಾಗೂ ಇತರೆ ಜಿಲ್ಲೆಗಳಿಂದ ಆಗಮಿಸಿದ ವಲಸೆಗಾರರನ್ನು ಜಿಲ್ಲೆಯ ಹುಣಸಗಿ ತಾಲ್ಲೂಕಿನ ಕೊಡೆಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತೆರೆಯಲಾದ ರಾಜನಕೊಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು. ಅವಲೋಕನೆಗಾಗಿ ಇರಿಸಲಾದ ಪರುತು ನಾಯಕ ತಾಂಡಾದ ವಲಸೆಗಾಗರರು ಕ್ವಾರಂಟೈನ್ ಕೇಂದ್ರದಲ್ಲಿರದೇ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಕೊರೊನಾ ಸಾಂಕ್ರಾಮಿಕ ರೋಗವನ್ನು ಹರಡಿಸುವ ದುರುದ್ದೇಶದಿಂದ ತಾಂಡಾದಲ್ಲಿ ತಿರುಗಾಡಲು ಕ್ವಾರಂಟೈನ್ ಕೇಂದ್ರದಿಂದ ಹೊರ ಹೋಗುತ್ತಿರುವಾಗ, ಕ್ವಾರಂಟೈನ್ ಕೇಂದ್ರದ ಸಿಬ್ಬಂದಿಯವರು ತಡೆಯಲು ಪ್ರಯತ್ನಿಸಿದ್ದಾರೆ. ಆಗ ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ ಪ್ರಯುಕ್ತ ಸದರಿ ಆರೋಪಿಗಳ ಮೇಲೆ ಒಟ್ಟು 3 ಪ್ರಕರಣಗಳು ದಾಖಲಾಗಿದ್ದು, ತನಿಖೆ ಹಂತದಲ್ಲಿರುತ್ತವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇನ್ಸ್ಟಿಟ್ಯೂಶನಲ್ ಕ್ವಾರಂಟೈನ್ನಲ್ಲಿ ಅವಲೋಕನೆಗಾಗಿ ಇರುವ ಜನರು, ತಮ್ಮ ಅವಲೋಕನಾ ಅವಧಿ ಮುಗಿಯುವವರೆಗೆ ಕಡ್ಡಾಯವಾಗಿ ಕ್ವಾರಂಟೈನ್ ಕೇಂದ್ರದಲ್ಲಿ ಇರತಕ್ಕದ್ದು. ಒಂದು ವೇಳೆ ಕ್ವಾರಂಟೈನ್ ಕೇಂದ್ರ ಬಿಟ್ಟು ತಿರುಗಾಡಿದಲ್ಲಿ ಅಂತವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.