ಬೆಂಗಳೂರು, ಮೇ 22 (DaijiworldNews/PY) : ಈಗಾಗಲೇ ಸ್ವತಂತ್ರ ಸಂಸ್ಥೆಯಾದ ರಾಜ್ಯದ ಚುನಾವಣಾ ಆಯೋಗ ಚುನಾವಣೆ ಪ್ರಕ್ರಿಯೆಯನ್ನು ಪ್ರಾರಂಭ ಮಾಡಬೇಕಿತ್ತು. ಆದರೆ, ಸರ್ಕಾರದಿಂದ ಅದರ ಮೇಲೆ ಪ್ರಭಾವ ಬೀರುವ ಪ್ರಯತ್ನ ಆದಂತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ರಾಜ್ಯ ಚುನಾವಣಾ ಆಯುಕ್ತ ಡಾ.ಬಿ.ಬಸವರಾಜು ಅವರಿಗೆ ಚುನಾವಣೆ ನಡೆಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಗದಿತ ಸಮಯದಲ್ಲಿ ಪಂಚಾಯತಿಗಳಲ್ಲಿ ಚುನಾವಣೆ ನಡೆಯದಿದ್ದರೆ, ಅದು ಸಂವಿಧಾನದ ಆಶಯಗಳ ಉಲ್ಲಂಘನೆ ಆಗುತ್ತದೆ ಎಂದು ತಿಳಿಸಿದರು.
ನೂತನವಾಗಿ ಆಡಳಿತ ಸಮಿತಿ ರಚಿಸುವ ಬಗ್ಗೆ ಸಚಿವ ಈಶ್ವರಪ್ಪ ಅವರು ಹೇಳಿಕೆಯನ್ನು ನೀಡುತ್ತಲೇ ಇದ್ದಾರೆ. ಆದರೆ, ಅದಕ್ಕೆ ಕಾಲಾವಕಾಶವಿಲ್ಲ. ಚುನಾವಣೆ ಪ್ರಕ್ರಿಯೆಯನ್ನು ಆಯೋಗವು ತಕ್ಷಣ ಪ್ರಾರಂಭ ಮಾಡಬೇಕು ಎಂದರು.
ನಾವು ಚುನಾವಣೆ ನಡೆಸಲೇಬೇಕು ಎಂದು ಒತ್ತಾಯ ಮಾಡಿದ್ದೇವೆ. ಆಯುಕ್ತರು ಕಾನೂನಿನ ಅನ್ವಯ ಕ್ಯ ತೆಗೆದುಕೊಳ್ಳುವುದಾಗಿ ಆಶ್ವಾಸನೆ ನೀಡಿದ್ದಾರೆ ಎಂದು ತಿಳಿಸಿದರು.