ಕೋಲ್ಕತ್ತ, ಮೇ 22 (DaijiworldNews/PY) : ಪ್ರಧಾನಿ ಮೋದಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶುಕ್ರವಾರ ಅಂಪನ್ ಚಂಡಮಾರುತದ ಬಾಧಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು.
ಪ್ರಧಾನಿ ಮೋದಿ ಅವರು ಕೋಲ್ಕತ್ತಾಗೆ ಬಂದಿಳಿದ ಸಂದರ್ಭ ಮಮತಾ ಬ್ಯಾನರ್ಜಿ ಹಾಗೂ ರಾಜ್ಯಪಾಲ ಜಗದೀಪ್ ಅವರನ್ನು ಸ್ವಾಗತಿಸಿದರು. ಬಳಿಕ ವಾಯುಪಡೆ ಹೆಲಿಕಾಫ್ಟರ್ ಮೂಲಕ ಪ್ರಧಾನಿ ಮೋದಿ ಹಾಗೂ ಮಮತಾ ಬ್ಯಾನರ್ಜಿ ಅವರು ದಕ್ಷಿಣ ಬಂಗಾಳ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು.
ಪಶ್ಚಿಮ ಬಂಗಾಳದಲ್ಲಿ ಉತ್ತರ ಹಾಗೂ ದಕ್ಷಿಣ 24 ಪರಗಣ ಜಿಲ್ಲೆಗಳು ಸಂಪೂರ್ಣ ನಾಶವಾಗಿದ್ದು, ಕೋಲ್ಕತ್ತದಲ್ಲಿ ಭಾರೀ ಹಾನಿ ಸಂಭವಿಸಿರುವ ವಿಚಾರವಾಗಿ ಪ್ರಧಾನಿ ಮೋದಿ ಅವರಿಗೆ ಮಮತಾ ಬ್ಯಾನರ್ಜಿ ಅವರು ಮಾಹಿತಿ ನೀಡಿದರು.
ಇಲ್ಲಿಯವರೆಗೆ ಅಂಫಾನ್ ಚಂಡಮಾರುತಕ್ಕೆ 80 ಜನರು ಸಾವನ್ನಪ್ಪಿದ್ದಾರೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಅಲ್ಲದೇ ಗಾಳಿಯ ಹೊಡೆತಕ್ಕೆ ನೂರಾರು ಕಾರುಗಳು ಸಿಲುಕಿ ನಜ್ಜುಗುಜ್ಜಾಗಿವೆ. ಗಾಳಿಯ ರಭಸಕ್ಕೆ ಮರಗಳು ಬುಡಮೇಲಾಗಿದ್ದು, ವಿದ್ಯುತ್ ಕಂಬಗಳು ಉರುಳಿ ಬಿದ್ದಿದೆ. ಬುಧವಾರ ಸಂಜೆಯಿಂದ ಉತ್ತರ ಹಾಗೂ ದಕ್ಷಿಣ 24 ಪರಗಣ ಜಿಲ್ಲೆಗಳು ಮತ್ತು ಕೋಲ್ಕತ್ತದ ಬಹುತೇಕ ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಇಲ್ಲ ಎಂದು ವರದಿಯಾಗಿದೆ.
ಚಂಡಮಾರುತದಿಂದ ಒಡಿಶಾದಲ್ಲಿ 44.8 ಲಕ್ಷ ಜನರು ಬಾಧಿತರಾಗಿದ್ದು, ಕರಾವಳಿ ಜಿಲ್ಲೆಗಳಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿವೆ. ಚಂಡಮಾರುತದ ಪ್ರಭಾವಕ್ಕೆ ಒಳಗಾಗಿರುವ ಒಡಿಶಾದ ಪ್ರದೇಶಗಳಲ್ಲಿ ಮುಂದಿನ 24ರಿಂದ 48 ಗಂಟೆಗಳ ಅವಧಿಯಲ್ಲಿ ಜನಜೀವನ ಸಹಜ ಸ್ಥಿತಿಗೆ ಬರಲಿದೆ ಎಂಬುದಾಗಿ ಹವಾಮಾನ ಇಲಾಖೆ ತಿಳಿಸಿದೆ.