ನವದೆಹಲಿ, ಮೇ 22 (Daijiworld News/MSP): ಕೇಂದ್ರ ಸರ್ಕಾರ ಘೋಷಿಸಿರುವ 20.9 ಲಕ್ಷ ಕೋಟಿಯ ಪ್ಯಾಕೇಜ್ ಆರ್ಥಿಕತೆ ಚೇತರಿಕೆಗೆ ಸಾಕಾಗುವುದಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ರಘು ರಾಮ್ರಾಜನ್ ಅಭಿಪ್ರಾಯ ಪಟ್ಟಿದ್ದಾರೆ.
ಈ ಪ್ಯಾಕೇಜ್ ನಲ್ಲಿ ವಲಸಿಗ ಕಾರ್ಮಿಕರಿಗೆ ಉಚಿತವಾಗಿ ಆಹಾರ ಧಾನ್ಯ ನೀಡುವ ಬಗ್ಗೆ ಹೇಳಲಾಗಿದೆ. ಆದರೆ ಲಾಕ್ ಡೌನ್ ನಿಂದಾಗಿ ಉದ್ಯೋಗ ಇಲ್ಲದ ಅವರಿಗೆ ಹಾಲು, ತರಕಾರಿ, ಅಡುಗೆ ಎಣ್ಣೆ ಖರೀದಿಗೆ ಮತ್ತು ಬಾಡಿಗೆ ಪಾವತಿಸಲು ಹಣ ಬೇಕು ಎಂದಿದ್ದಾರೆ. ಇಡೀ ವಿಶ್ವ ಮಹಾ ಆರ್ಥಿಕ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇಂಥ ಸಂದರ್ಭದಲ್ಲಿ ಅದೆಷ್ಟು ದೊಡ್ಡ ಪ್ರಮಾಣದ ಪರಿಹಾರವೇ ಆದರೂ ‘ಜನರಿಗೆ ಸಾಲಲ್ಲ ಕೇಂದ್ರದ ಪ್ಯಾಕೇಜ್’ ಸಾಲುವುದಿಲ್ಲ ಎಂದು ಅವರು ಹೇಳಿದ್ದಾರೆ.
ಈ ಸಮಸ್ಯೆ ನಿರ್ದಿಷ್ಟವಾಗಿ ಭಾರತದ ಪಾಲಿಗೆ ಹೆಚ್ಚು. ಏಕೆಂದರೆ ಕಳೆದ ಹಲವು ವರ್ಷಗಳು ಆರ್ಥಿಕ ನಿಧಾನಗತಿಯ ಕಾರಣಕ್ಕೆ ನಮ್ಮ ಬೆಳವಣಿಗೆ ಹಿಂಜರಿತ ಅನುಭವಿಸಿದೆ. ನಮ್ಮ ವಿತ್ತೀಯ ಕೊರತೆ ಹೆಚ್ಚಾಗಿದೆ. ಆರ್ಥಿಕತೆ ಮರಳಿ ಸರಿಹೋಗಲು ಇನ್ನೂ ಹೆಚ್ಚಿನದನ್ನು ಮಾಡಬೇಕಿದೆ ಎಂದಿದ್ದಾರೆ.