ನವದೆಹಲಿ, ಮೇ 22 (DaijiworldNews/PY) : ಪಶ್ಚಿಮ ಬಂಗಾಳದಲ್ಲಿ ಶುಕ್ರವಾರ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ಮೋದಿ ಅವರು ಕೇಂದ್ರದಿಂದ 1,000 ಕೋಟಿ ರೂ ಸಹಕಾರ ನೀಡುವುದಾಗಿ ಘೋಷಿಸಿದ್ದಾರೆ.
ವೈಮಾನಿಕ ಸಮೀಕ್ಷೆ ನಡೆಸಿದ ನಂತರ ರಾಜ್ಯ ಸರ್ಕಾರದ ಪ್ರಮುಖರೊಂದಿಗೆ ಮಾತುಕತೆ ನಡೆಸಿದ ಅವರು, ಪಶ್ಚಿಮ ಬಂಗಾಳದ ನನ್ನ ಸಹೋದರ ಹಾಗೂ ಸಹೋದರಿಯರೇ ಇಂತಹ ಕಠಿಣ ಸಂದರ್ಭದಲ್ಲಿ ನಿಮ್ಮೊಂದಿಗೆ ಇಡೀ ದೇಶವೇ ನಿಂತಿರುವುದನ್ನು ಖಚಿತಪಡಿಸುತ್ತೇನೆ. ಕೇಂದ್ರದಿಂದ ಅಂಫಾನ್ ಚಂಡಮಾರುತದಿಂದ ಉಂಟಾಗಿರುವ ಹಾನಿಗಳ ಬಗ್ಗೆ ವಿವರವಾದ ಸಮೀಕ್ಷೆ ಮಾಡಲು ತಂಡ ಕಳುಹಿಸಲಾಗುತ್ತದೆ ಎಂದು ತಿಳಿಸಿದರು.
ಕಳೆದ ವರ್ಷ ಮೇ ತಿಂಗಳ ಸಂದರ್ಭ ದೇಶವು ಚುನಾವಣೆಗಳಲ್ಲಿ ನಿರತವಾಗಿತ್ತು. ಅಲ್ಲದೇ, ಆ ವೇಳೆ ಒಡಿಶಾಗೆ ಎರಗಿದ ಚಂಡಮಾರುತದ ಪರಿಣಾಮಗಳ ವಿರುದ್ದ ಹೋರಾಡಿದ್ದೆವು. ಇದೀಗ ಒಂದು ವರ್ಷದ ಬಳಿಕ ಪುನಃ ಬಂದ ಚಂಡಮಾರುತದಿಂದ ನಮ್ಮ ಕರಾವಳಿ ಭಾಗಗಳಿಗೆ ಹಾನಿ ಉಂಟಾಗಿದೆ. ಈ ಚಂಡಮಾರುತದ ಪರಿಣಾಮದಿಂದ ಪಶ್ಚಿಮ ಬಂಗಾಳದ ಜನತೆ ತೀವ್ರವಾದ ಪರಿಣಾಮ ಎದುರಿಸಿದ್ದಾರೆ. ಚಂಡಮಾರುತದಿಂದ ಮೃತಪಟ್ಟಿರುವ ವ್ಯಕ್ತಿಯ ಕುಟುಂಬಕ್ಕೆ 2 ಲಕ್ಷ ಮತ್ತು ಗಂಭೀರವಾಗಿ ಗಾಯಗೊಂಡಿರುವವರಿಗೆ 50,000 ಪರಿಹಾರ ನೀಡುವುದಾಗಿ ಪ್ರಕಟಿಸಿದ್ದಾರೆ.
ಅಂಫಾನ್ ಚಂಡಮಾರುತದ ಪರಿಣಾಮ ಎದುರಿಸಲು ಮುಂಜಾಗ್ರತ ಕ್ರಮವಾಗಿ ಜನರನ್ನು ಸುರಕ್ಷಿತವಾದ ತಾಣಗಳಿಗೆ ಸ್ಥಳಾಂತರ ಮಾಡುವುದು ಮುಖ್ಯ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿಯೂ ಸಿಎಂ ಮಮತಾ ಬ್ಯಾನರ್ಜಿ ಅವರ ನಾಯಕತ್ವದಲ್ಲಿ ಪಶ್ಚಿಮಬಂಗಾಳವು ಸಮರ್ಥವಾಗಿ ಹೋರಾಟ ನಡೆಸುತ್ತಿದೆ. ನಾವೆಲ್ಲರೂ ಅವರೊಂದಿಗೆ ಇದ್ದೇವೆ ಎಂದು ತಿಳಿಸಿದರು.