ಬೆಂಗಳೂರು, ಮೇ 22 (DaijiworldNews/PY) : ಮೇ 31ರವರೆಗೆ ಶ್ರಮಿಕ್ ರೈಲುಗಳ ಮೂಲಕ ಸ್ವಗ್ರಾಮಗಳಿಗೆ ತೆರಳಬಯಸುವ ವಲಸೆ ಕಾರ್ಮಿಕರು ಹಾಗೂ ಲಾಕ್ ಡೌನ್ ನಲ್ಲಿ ಸಿಲುಕಿರುವವರ ಪ್ರಯಾಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ತಮ್ಮ ಸ್ವಗ್ರಾಮಗಳಿಗೆ ಹಿಂದಿರುಗಲು ಪ್ರಯಾಣದ ವೆಚ್ಚವನ್ನು ಭರಿಸಲು ಸಾಧ್ಯವಾಗುತ್ತಿಲ್ಲವೆಂಬ ವಲಸೆ ಕಾರ್ಮಿಕರ ಮನವಿಯನ್ನು ಸರ್ಕಾರವು ಪರಿಗಣಿಸಿದೆ. ನಮ್ಮ ದೇಶದ ದೂರದ ಭಾಗಗಳಿಂದ ಬಂದಿರುವ ವಲಸೆ ಕಾರ್ಮಿಕರನ್ನು ನಾವು ನಮ್ಮದೇ ರಾಜ್ಯದ ಜನರು ಎಂದು ಭಾವಿಸುತ್ತೇವೆ ಹಾಗೂ ಅವರ ಕಷ್ಟಕ್ಕೆ ಸರ್ಕಾರವು ಸ್ಪಂದಿಸಬೇಕೆಂಬುದು ನನ್ನ ದೃಢ ನಿರ್ಧಾರ ಎಂದು ಉಲ್ಲೇಖಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ದಿನಾಂಕ: 31-05-2020 ವರೆಗೆ ಶ್ರಮಿಕ್ ರೈಲುಗಳ ಮೂಲಕ ಸ್ವಗ್ರಾಮಗಳಿಗೆ ತೆರಳಬಯಸುವ ವಲಸೆ ಕಾರ್ಮಿಕರು ಹಾಗೂ ಲಾಕ್ ಡೌನ್ ನಲ್ಲಿ ಸಿಲುಕಿರುವವರ ಪ್ರಯಾಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ" ಎಂದು ಆಶ್ವಾಸನೆ ನೀಡಿದ್ದಾರೆ ಎಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಲಾಕ್ಡೌನ್ನಿಂದಾಗಿ ನಾನಾ ರಾಜ್ಯದಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ಇವರನ್ನು ತಮ್ಮ ಊರುಗಳಿಗೆ ಕಳುಹಿಸುವ ನಿಟ್ಟಿನಲ್ಲಿ ಶ್ರಮಿಕ್ ರೈಲುಗಳನ್ನು ಕಳೆದ ಎರಡು ವಾರಗಳಿಂದ ಚಾಲನೆ ಮಾಡಲಾಗುತ್ತಿದೆ . ಆದರೆ, ದುಬಾರಿ ಪ್ರಯಾಣವನ್ನು ಕಾರ್ಮಿಕರಿಂದ ವಸೂಲಿ ಮಾಡಲಾಗುತ್ತಿದೆ.