ಮುಂಬೈ, ಮೇ 22 (DaijiworldNews/SM): ಕರಾವಳಿ ಮೂಲದ ವ್ಯಕ್ತಿ ಮುಂಬೈನಲ್ಲಿ ಮೃತಪಟ್ಟು, ಅದೇ ದಿನ ಮೂಡುಬಿದಿರೆಯಲ್ಲಿ ಪತ್ನಿ ಮಗುವಿಗೆ ಜನ್ಮ ನೀಡಿದ ಹಿನ್ನೆಲೆಯಲ್ಲಿ ತಾಯಿಮಗುವನ್ನು ನೋಡಲೆಂದು ಮುಂಬೈನಿಂದ ಮೂಡುಬಿದಿರೆಗೆ ಆಗಮಿಸುತ್ತಿದ್ದ ಮೃತರ ಅಣ್ಣನಿಗೆ ಪೊಲೀಸರು ತಡೆದ ಘಟನೆ ನಡೆದಿದ್ದು ಕೋಲಾಪುರ ಪೊಲೀಸರು ಅವರನ್ನು ಮೂಡುಬಿದಿರೆಗೆ ಬರಲು ಬಿಡದೆ ಥಳಿಸಿದ್ದಾರೆ ಎಂದು ತಿಳಿದುಬಂದಿದೆ.
ಮುಂಬೈನ ಕೋವಿಡ್ ಆಸ್ಪತ್ರೆಯಲ್ಲಿ ವ್ಯಕ್ತಿ ಮೃತಪಟ್ಟ ದಿನದಂದೇ ಮೂಡುಬಿದಿರೆಯಲ್ಲಿ ಆಕೆಯ ಪತ್ನಿ ಮಗುವಿಗೆ ಜನ್ಮ ನೀಡಿದ್ದಾರೆ. ನಾದಿನಿ ಹಾಗೂ ಮಗುವನ್ನು ನೋಡಲು ಹಾಗೂ ಆಕೆಗೆ ದೈರ್ಯ ತುಂಬಲೆಂದು ಮೃತರ ಅಣ್ಣ ಮುಂಬೈನಿಂದ ಹೊರಟಿದ್ದರು. ಆದರೆ, ಅವರಿಗೆ ಕರಾವಳಿಗೆ ಬರಲು ಪ್ರವೇಶ ನಿರಾಕರಿಸಿದ್ದಾರೆ. ಮುಂಬೈ-ಕರ್ನಾಟಕ ಗಡಿಯಲ್ಲಿ ಪ್ರವೇಶ ನಿರಾಕರಣೆ ಮಾಡಲಾಗಿದೆ. ಅಲ್ಲದೆ, ಕೋಲಾಪುರ ಪೊಲೀಸರು ಅವರನ್ನು ತಡೆದು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದ್ದು, ದೈಜಿವರ್ಲ್ಡ್ ಗೆ ಮಾಹಿತಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಎಷ್ಟೇ ವಿನಂತಿಸಿದರೂ ಮಾನವೀಯತೆ ಮರೆತಂತೆ ಅವರು ವರ್ತಿಸಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಥಳಿಸಿದ ರಭಸಕ್ಕೆ ವ್ಯಕ್ತಿಯ ಕೈಯಲ್ಲಿದ್ದ ಮೊಬೈಲ್ ಪುಡಿಯಾಗಿದೆ. ಕೋಲಾಪುರ ಪೊಲೀಸರ ದರ್ಪದ ನಡೆಗೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪಗಳು ವ್ಯಕ್ತವಾಗುತ್ತಿವೆ.