ಬೆಂಗಳೂರು, ಮೇ 23 (Daijiworld News/MB) : ಕೊರೊನಾ ಕಾರಣದಿಂದಾಗಿ ಕಂಟೈನ್ಮೆಂಟ್ ವಲಯಗಳೆಂದು ಘೋಷಿಸಲಾದ ಸ್ಥಳಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಶುಕ್ರವಾರ ಸಂದರ್ಶನವೊಂದರಲ್ಲಿ ಮಾಹಿತಿ ನೀಡಿದ ಅವರು, ಪರೀಕ್ಷೆ ನಡೆಯುವ ದಿನದ ಆಸುಪಾಸಿನಲ್ಲಿ ಯಾವುದೇ ವಲಯ ಕಂಟೈನ್ಮೆಂಟ್ ವಲಯವೆಂದು ಘೋಷಿತವಾದಾಗ ಅಲ್ಲಿನ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ಸಂದರ್ಭದಲ್ಲಿ ಅವಕಾಶ ನೀಡಲಾಗುವುದು. ಆ ವೇಳೆ ವಿದ್ಯಾರ್ಥಿಗಳನ್ನು ಹೊಸ ಪರೀಕ್ಷಾರ್ಥಿ ಎಂದೇ ಪರಿಗಣಿಸಿ ಅವಕಾಶ ಕಲ್ಪಿಸಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ.
ವಲಸೆ ಕಾರ್ಮಿಕರ ಮಕ್ಕಳು, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ಶಾಲೆಗಳು, ಹಾಸ್ಟೆಲ್ಗಳ ವಾಸಿ ವಿದ್ಯಾರ್ಥಿಗಳಿಗೆ ಅವರು ವಾಸವಾಗಿರುವ ಸ್ಥಳಗಳ ಹತ್ತಿರದ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗುತ್ತದೆ. ಪರೀಕ್ಷೆಗೆ ಹಾಜರಾಗಲಿರುವ ಎಲ್ಲ ಅಭ್ಯರ್ಥಿಗಳಿಗೆ ಹೊಸದಾಗಿ ಹಾಲ್ ಟಿಕೆಟ್ಗಳನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು.
ಯಾರೋಬ್ಬರ ಪ್ರತಿಷ್ಠೆಗಾಗಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲಾಗುತ್ತಿಲ್ಲ, ಮಕ್ಕಳ ಹಿತದೃಷ್ಟಿಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಜುಲೈ 31ರೊಳಗೆ ಮೌಲ್ಯಮಾಪನ ಮುಗಿಸಿ ಫಲಿತಾಂಶ ಪ್ರಕಟಿಸಲು ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.