ನವದೆಹಲಿ, ಮೇ 23 (DaijiworldNews/PY) : ಕೊರೊನಾ ಪ್ರತ್ಯೇಕ ವಾಸಕ್ಕಾಗಿ ಬಳಸಿಕೊಳ್ಳುವುದಕ್ಕೆ ಎಂದು ಪರಿವರ್ತಿಸಲಾಗಿದ್ದ ಕೆಲವು ಬೋಗಿಗಳನ್ನು ಮಾರ್ಪಡಿಸಿ, ಶ್ರಮಿಕ್ ವಿಶೇಷ ರೈಲುಗಳಿಗೆ ಉಪಯೋಗಿಸಿಕೊಳ್ಳಲು ರೈಲ್ವೆ ಇಲಾಖೆ ತೀರ್ಮಾನ ಮಾಡಿದೆ.
ಈ ಬಗ್ಗೆ ರೈಲ್ವೆ ಮಂಡಳಿಯು ಗುರುವಾರ ಪತ್ರ ಬರೆದಿದ್ದು, ಐಸೋಲೇಷನ್ಗಾಗಿ ಉಪಯೋಗಿಸಲು ಉದ್ದೇಶಿಸಿದ್ದ ಶೇ.60ರಷ್ಟು ಬೋಗಿಗಳನ್ನು ಪ್ರಯಾಣಿಕ ರೈಲಿನ ಸಾಮಾನ್ಯ ಬೋಗಿಗಳಾಗಿ ಪುನರ್ರೂಪಿಸುವಂತೆ ಎಲ್ಲಾ ವಲಯ ಕಚೇರಿಗಳಿಗೆ ತಿಳಿಸಿದೆ.
ರಾಜ್ಯ ಸರ್ಕಾರಗಳು ಐಸೋಲೇಷನ್ ಬೋಗಿಗಳನ್ನು ಸರಿಯಾಗಿ ಬಳಸಿಕೊಳ್ಳದೇ ಇದ್ದ ಕಾರಣ 3,100 ಬೋಗಿಗಳನ್ನು ಪುನಃ ಸಾಮಾನ್ಯ ಬೋಗಿಗಳಾಗಿ ಪರಿವರ್ತನೆ ಮಾಡಲು ಇಲಾಖೆ ನಿರ್ಧರಿಸಿದೆ. ಐಸೋಲೇಷನ್ ವಾರ್ಡ್ಗಳಾಗಿ ಇನ್ನುಳಿದಂತಹ 2,131 ಬೋಗಿಗಳನ್ನು ಉಪಯೋಗಿಸಿಕೊಳ್ಳಬಹುದಾಗಿದ್ದು, ಅವುಗಳನ್ನು ರಾಜ್ಯ ಸರ್ಕಾರಗಳು ಬೇಡಿಕೆ ಸಲ್ಲಿಸಿದರೆ ಒದಗಿಸಲಾಗುತ್ತದೆ. ದಿನಕ್ಕೆ 300 ರೈಲುಗಳನ್ನು ವಲಸೆ ಕಾರ್ಮಿಕರಿಗಾಗಿ ಇಲಾಖೆ ಓಡಿಸುತ್ತಿದ್ದು, ಇಲಾಖೆಯು ಸುಮಾರು 2,317 ಶ್ರಮಿಕ್ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಅವರ ರಾಜ್ಯಗಳಿಗೆ 30 ಲಕ್ಷಕ್ಕೂ ಅಧಿಕ ವಲಸೆ ಕಾರ್ಮಿಕರನ್ನು ತಲುಪಿಸಿದೆ.
ಕೊರೊನಾ ನಿಯಂತ್ರಿಸುವ ಸಲುವಾಗಿ ಲಾಕ್ಡೌನ್ ಘೋಷಣೆ ಮಾಡಿ ಪ್ರಯಾಣಿಕ ರೈಲು ಸಂಚಾರವನ್ನು ನಿರ್ಬಂಧಿಸಿದ ಬೆನ್ನಲ್ಲೇ ಬೋಗಿಗಳನ್ನು ಕೊರೊನಾ ವಿರುದ್ದದ ಹೋರಾಟಕ್ಕೆ ಉಪಯೋಗಿಸಿಕೊಳ್ಳಲು ರೈಲ್ವೆ ಇಲಾಖೆ ನಿರ್ಧಾರ ಮಾಡಿತ್ತು. ಅಲ್ಲದೇ, ಪಿಪಿಇ ಕಿಟ್, ಸ್ಯಾನಿಟೈಸರ್ ಹಾಗೂ ಇತರೆ ವೈದ್ಯಕೀಯ ಪರಿಕರಗಳು ಇಲಾಖೆಯ ಕಾರ್ಖಾನೆಗಳಲ್ಲಿ ತಯಾರಾದವು. ಇದರೊಂದಿಗೆ ತನ್ನ ಆಸ್ಪತ್ರೆಗಳನ್ನು ಇಲಾಖೆಯು ಕೊರೊನಾ ರೋಗಿಗಳ ಚಿಕಿತ್ಸೆಗೆ ಇರಿಸಿದ್ದು, ಚಿಕಿತ್ಸೆಗೆ ನೆರವಾಗಲು ವೈದ್ಯರು ಹಾಗೂ ಸಿಬ್ಬಂದಿಗಳನ್ನು ನಿಯೋಜನೆ ಮಾಡಿದೆ.