ಬೆಂಗಳೂರು, ಮೇ 23 (Daijiworld News/MB) : ಕೊರೊನಾ ಸೋಂಕು ಪ್ರಕರಣಗಳು ಅಧಿಕವಾಗಿರುವ ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ದೆಹಲಿ, ರಾಜಸ್ಥಾನ ಹಾಗೂ ಮಧ್ಯಪ್ರದೇಶದಿಂದ ಬಂದವರಿಗೆ 7 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ ಉಳಿದವರಿಗೆ ಹೋಂ ಕ್ವಾರಂಟೈನ್ಗೆ ಆದೇಶಿಸಿ ಆರೋಗ್ಯ ಇಲಾಖೆ ಸೂಚನೆ ಹೊರಡಿಸಿದೆ.
ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿರುವ ಕರ್ನಾಟಕ ಆರೋಗ್ಯ ಇಲಾಖೆ, ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ದೆಹಲಿ, ರಾಜಸ್ಥಾನ ಹಾಗೂ ಮಧ್ಯಪ್ರದೇಶದಿಂದ ಬಂದವರಿಗೆ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಹಾಗೂ 5 ಅಥವಾ 7ನೇ ದಿನ ಅವರನ್ನು ಕೊರೋನಾ ಸೋಂಕು ಪರೀಕ್ಷೆಗೆ ಒಳಪಡಿಸಬೇಕು. ಉಳಿದ ಎಲ್ಲರಿಗೂ 14 ದಿನಗಳ ಕಾಲ ಹೋಂ ಕ್ವಾರಂಟೈನ್ ಎಂದು ತಿಳಿಸಿದೆ.
ಹಾಗೆಯೇ ಸೋಂಕು ಹೆಚ್ಚಿರುವ ರಾಜ್ಯಗಳಿಂದ ಬಂದ ಗರ್ಭಿಣಿಯರು, 80 ವರ್ಷ ಮೇಲ್ಪಟ್ಟ ವೃದ್ಧರು, 10 ವರ್ಷದೊಳಗಿನ ಮಕ್ಕಳು, ಗಂಭೀರ ಅನಾರೋಗ್ಯ ಸಮಸ್ಯೆಯುಳ್ಳವರು, ವೈದ್ಯಕೀಯ ಸಿಬ್ಬಂದಿ ಹಾಗೂ ರಕ್ಷಣಾ ಇಲಾಖೆ ಸಿಬ್ಬಂದಿಗೆ ಸಾಂಸ್ಥಿಕ ಕ್ವಾರಂಟೈನ್ನಿಂದ ವಿನಾಯಿತಿ ನೀಡಲಾಗಿದ್ದು ಅವರೊಂದಿಗೆ ಓರ್ವ ಸ್ಥಳೀಯ ಆರೋಗ್ಯ ಸಿಬ್ಬಂದಿ ನಿಗಾವಹಿಸಲಿದ್ದಾರೆ ಎಂದು ತಿಳಿಸಿದೆ.
ಇನ್ನು ಈ ಕುರಿತಾಗಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ಪ್ರವೀಣ್ ಸೂದ್ ಕೂಡಾ ಟ್ವೀಟ್ ಮಾಡಿದ್ದು ಮಹಾರಾಷ್ಟ್ರ, ರಾಜಸ್ಥಾನ, ದೆಹಲಿ, ಗುಜರಾತ್, ತಮಿಳುನಾಡು, ದೆಹಲಿ ಮತ್ತು ಮಧ್ಯಪ್ರದೇಶದಿಂದ ಕರ್ನಾಟಕಕ್ಕೆ ದೇಶೀಯ ವಿಮಾನಗಳ ಮೂಲಕ ಬಂದವರಿಗೆ 7 ದಿನ ಸಾಂಸ್ಥಿಕ ಕ್ವಾರಂಟೈನ್ನಲ್ಲಿರಿಸಿ ಬಳಿಕ ಹೋಂ ಕ್ವಾರಂಟೈನ್ಗೆ ಅವಕಾಶ ನೀಡಲಾಗುತ್ತದೆ.
ಈ ಮೊದಲು ಅನ್ಯ ರಾಜ್ಯಗಳಿಂದ ವಾಪಸ್ಸಾಗುವ ಎಲ್ಲರಿಗೂ 14 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಹಾಗೂ 14 ದಿನಗಳ ಹೋಂ ಕ್ವಾರಂಟೈನ್ ವಿಧಿಸಲಾಗಿತ್ತು.