ನವದೆಹಲಿ, ಮೇ 23 (Daijiworld News/MB) : ಅನಾರೋಗ್ಯಕ್ಕೆ ಒಳಗಾಗಿರುವ ತನ್ನ ತಂದೆಯನ್ನು 15 ವರ್ಷದ ಬಾಲಕಿ ಚಿಕಿತ್ಸೆಗೆಂದು ಹರ್ಯಾಣದ ಗುರುಗ್ರಾಮ್ನಿಂದ ಬಿಹಾರದ ದರ್ಬಾಂಗಗೆ ಸೈಕಲ್ನಲ್ಲೇ ಕರೆತಂದ ಆಧುನಿಕ ಶ್ರವಣ ಕುಮಾರಿ ಜ್ಯೋತಿಯ ಬಗ್ಗೆ ವಿದೇಶದಲ್ಲೂ ಸುದ್ದಿಯಾಗಿದ್ದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಇವಾಂಕಾ ಟ್ವೀಟ್ ಮಾಡಿದ್ದು, 5 ವರ್ಷದ ಜ್ಯೋತಿ ಕುಮಾರಿ ಗಾಯಗೊಂಡ ತನ್ನ ತಂದೆಯನ್ನು 7 ದಿನಗಳ ಕಾಲ ಸೈಕಲ್ನಲ್ಲಿ 1,200 ಕಿ.ಮೀಗೂ ಅಧಿಕ ಪ್ರಯಾಣಿಸಿ ತನ್ನ ಹಳ್ಳಿಗೆ ಕರೆದೊಯ್ದಿದ್ದಾಳೆ. ಸಹಿಷ್ಣುತೆ ಮತ್ತು ಪ್ರೀತಿಯ ಈ ಸುಂದರ ಸಾಧನೆಯು ಭಾರತೀಯ ಜನರ ಮತ್ತು ಸೈಕ್ಲಿಂಗ್ ಒಕ್ಕೂಟದ ಕಲ್ಪನೆಯನ್ನು ಸೆರೆಹಿಡಿದಿದೆ ಎಂದಿದ್ದು ಈ ಟ್ವೀಟ್ನ್ನು 61.5 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. 18.4 ಸಾವಿರ ಬಾರಿ ರೀಟ್ವೀಟ್ ಮಾಡಲಾಗಿದೆ.
ಇನ್ನು ಜ್ಯೋತಿ ಸಾಧನೆಯನ್ನು ಗುರುತಿಸಿರುವ ಭಾರತೀಯ ಸೈಕ್ಲಿಂಗ್ ಫೆಡರೇಷನ್ ಟ್ರಯಲ್ಸ್ನಲ್ಲಿ ಭಾಗಿಯಾಗುವಂತೆ ಆಕೆಗೆ ಆಹ್ವಾನ ನೀಡಿದ್ದು ಈ ಬಗ್ಗೆ ಮಾಹಿತಿ ನೀಡಿರುವ ಸೈಕ್ಲಿಂಗ್ ಫೆಡರೇಷನ್ನ ಮುಖ್ಯಸ್ಥ ಓಂಕಾರ್ ಸಿಂಗ್, ಆ ಬಾಲಕಿಯಲ್ಲಿ ಉತ್ತಮ ಸಾಮರ್ಥ್ಯ ಇದೆ. ಅದೇನೋ ವಿಶೇಷ ಪ್ರತಿಭೆ ಇದೆ ಎನಿಸುತ್ತಿದೆ. ಲಾಕ್ಡೌನ್ ತೆರವುಗೊಳಿಸಿದ ಬಳಿಕ ಜ್ಯೋತಿಗೆ ದೆಹಲಿಯ ಇಂದಿರಾಗಾಂಧಿ ಸೈಕ್ಲಿಂಗ್ ಅಕಾಡೆಮಿಯಲ್ಲಿ ಟ್ರಯಲ್ಸ್ ನೀಡಲು ವ್ಯವಸ್ಥೆ ಕಲ್ಪಿಸಲಾಗುತ್ತದೆ. ಈ ಬಗ್ಗೆ ಅವರಿಗಡ ತಿಳಿಸಲಾಗಿದೆ. ಅವರು ಗ್ರಾಮದಿಂದ ದೆಹಲಿಗೆ ಬರುವ ಎಲ್ಲಾ ವೆಚ್ಚವನ್ನು ನಮ್ಮ ಸಂಸ್ಥೆ ಭರಿಸಲಿದೆ ಎಂದು ತಿಳಿಸಿದ್ದಾರೆ.
ಸೈಕಲ್ನಲ್ಲೇ 1200 ಕಿ.ಮೀ ಕ್ರಮಿಸುವುದು ಸುಲಭದ ವಿಚಾರವಲ್ಲ. ಮೊದಲು ಆಕೆಯ ದೈಹಿಕ ಕ್ಷಮತೆಯ ಪರೀಕ್ಷೆ ನಡೆಸಿ ನಮ್ಮ ಅಕಾಡೆಮಿಯಲ್ಲಿರುವ ಕಂಪ್ಯೂಟರೀಕೃತ ಸೈಕಲ್ ಮೇಲೆ ಪರೀಕ್ಷೆ ನೀಡಲು ಅವಕಾಶ ನೀಡುತ್ತೇವೆ. ಇದಕ್ಕಾಗಿ ಏಳೆಂಟು ಮಾನದಂಡಗಳನ್ನು ನಿಗದಿಸಿದ್ದೇವೆ. ಅವುಗಳಲ್ಲಿ ಉತ್ತೀರ್ಣವಾದ್ದಲ್ಲಿ 15 ವರ್ಷದೊಳಗಿನವರ ಟ್ರೇನಿಗಳಲ್ಲಿ ಸ್ಥಾನ ಪಡೆಯುವರು ಎಂದು ಹೇಳಿದ್ದಾರೆ.
ಇನ್ನು ತನಗೆ ಸೈಕ್ಲಿಂಗ್ ಟ್ರಯಲ್ಸ್ಗೆ ಕರೆ ಬಂದಿರುವ ಕುರಿತಾಗಿ ಮಾತನಾಡಿರುವ ಜ್ಯೋತಿ ಕುಮಾರಿ, ಬಹಳ ಸಂತೋಷವಾಗಿದ್ದು ದೆಹಲಿಗೆ ಹೋಗಿ ಟ್ರಯಲ್ಸ್ನಲ್ಲಿ ಭಾಗವಹಿಸುತ್ತೇನೆ ಎಂದು ತಿಳಿಸಿದ್ದಾರೆ.
ಜ್ಯೋತಿಯ ತಂದೆ ಮೋಹನ್ ಪಾಸ್ವಾನ್ ಗುರುಗ್ರಾಮದಲ್ಲಿ ರಿಕ್ಷಾ ಚಾಲಕರಾಗಿದ್ದು ಅಪಘಾತಕ್ಕೆ ಒಳಗಾಗಿದ್ದರು. ಅದೇ ವೇಳೆ ಲಾಕ್ಡೌನ್ ಘೋಷಣೆಯಾಗಿದ್ದು ಆ ಆಟೋದ ಮಾಲಕರು ಆಟೋವನ್ನು ಕೊಂಡೊಯ್ದಿದ್ದು ಇವರು ತಮ್ಮ ಊರಿಗೆ ವಾಪಾಸ್ ಆಗಲಾಗದೆ ಅಲ್ಲೇ ಉಳಿದರು. ಈ ಸಂದರ್ಭದಲ್ಲಿ ಜ್ಯೋತಿ ಸೈಕಲ್ನಲ್ಲೇ ತಂದೆಯನ್ನು ಕರೆದು ತಂದಿದ್ದು ಊರಿನಲ್ಲೇ ಶ್ರವಣ ಕುಮಾರಿ ಎಂದು ಖ್ಯಾತಿ ಪಡೆದರು.