ಬೆಂಗಳೂರು, ಮೇ 23 (DaijiworldNews/PY) : ತಮ್ಮ ರಾಜ್ಯಕ್ಕೆ ವಾಪಾಸ್ಸಾಗಲು ಒಡಿಶಾ ರಾಜ್ಯಕ್ಕೆ ಸೇರಿದ ವಲಸಿಗರು ಸಾವಿರಾರು ಸಂಖ್ಯೆಯಲ್ಲಿ ಅರಮನೆ ಮೈದಾನಕ್ಕೆ ಧಾವಿಸಿದ್ದು, ಬಸ್ಸು ಹತ್ತಲು ನೂಕು ನುಗ್ಗಲು ಉಂಟಾಗಿತ್ತು.
ಎಲ್ಲಾ ವಲಸೆ ಕಾರ್ಮಿಕರಿಗೆ ಒಡಿಶಾಗೆ ತೆರಳಲು ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ ಎನ್ನುವ ಸಂದೇಶ ಶುಕ್ರವಾರ ಬಂದ ಕಾರಣ ಅರಮನೆ ಮೈದಾನದ ತ್ರಿಪುರವಾಸಿನಿ ದ್ವಾರದ ಬಳಿಗೆ ವಲಸಿಗರು ಗುಂಪು ಗುಂಪಾಗಿ ಆಗಮಿಸಿದ್ದರು.
ಪುರಿವರೆಗೆ ಮಾತ್ರವೇ ರೈಲು ವ್ಯವಸ್ಥೆ ಮಾಡಲಾಗಿದ್ದು, ಮುಂದಿನ ಯಾವುದೇ ಸ್ಥಳಗಳಿಗೆ ವ್ಯವಸ್ಥೆಯಿಲ್ಲ ಎಂದು ಮೈಕ್ನಲ್ಲಿ ವ್ಯವಸ್ಥಾಪಕರು ಹೇಳುತ್ತಿದ್ದಂತೆ ಜನರು ಗೊಂದಲಕ್ಕೀಡಾದರು. ಅರಮನೆ ಮೈದಾನಕ್ಕೆ ಪುರಿ ಹಾಗೂ ಸುತ್ತಮುತ್ತಲಿನ ವಲಸಿಗರೂ ಸೇರಿದಂತೆ ಒಡಿಶಾ ರಾಜ್ಯಕ್ಕೆ ಸೇರಿದ ವಲಸಿಗರು ಬಂದ ಕಾರಣ ನೂಕು ನುಗ್ಗಲಿಗೆ ಕಾರಣವಾಗಿದೆ ಎನ್ನಲಾಗಿದೆ.
ನೂಕು-ನುಗ್ಗಲಿನಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರು ಸೇರಿದಂತೆ ವಿವಿಧ ಕಾರ್ಯಗಳಲ್ಲಿ ತೊಡಗಿದ್ದವರೂ ಸೇರಿದ್ದಾರೆ. ಬೆಂಗಳೂರಿನಿಂದ ಶನಿವಾರ ರೈಲು ಹೊರಡಲಿದ್ದು, ರೈಲು ನಿಲ್ದಾಣಕ್ಕೆ ಎಲ್ಲರೂ ತಲುಪಲಿದ್ದಾರೆ. ಸರ್ಕಾರಿ ಬಸ್ಸುಗಳಲ್ಲಿ ಎಲ್ಲರನ್ನೂ ರೈಲು ನಿಲ್ದಾಣಕ್ಕೆ ತಲುಪಿಸುವ ವ್ಯವಸ್ಥೆ ಮಾಡಲಾಗಿದ್ದು, ಸರ್ಕಾರಿ ಬಸ್ಸುಗಳಲ್ಲಿ ಇವರನ್ನು ಉಚಿತವಾಗಿ ರೈಲು ನಿಲ್ದಾಣಕ್ಕೆ ಕರೆದೊಯ್ಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ಲಾ ವಲಸಿಗರು ಬಸ್ಸಿಗೆ ಹೋಗುವ ಆತುರದಿಂದ ಸಾಮಾಜಿಕ ಅಂತರ ಕಾಯ್ದುಕೊಂಡಿರಲಿಲ್ಲ. ಅಲ್ಲದೇ, ಕೆಲವರು ಮಾಸ್ಕ್ ಧರಿಸಿರಲಿಲ್ಲ. ಸ್ಥಳದಲ್ಲಿ ನಗರ ಸಂಚಾರ ಪೊಲೀಸರು ಹಾಗೂ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸರು ಹಾಜರಿದ್ದು, ಮುಂಜಾಗ್ರತಾ ಕ್ರಮವಾಗಿ ಬಿಗಿ ಭದ್ರತೆ ಕೈಗೊಂಡಿದ್ದಾರೆ.