ಬೆಂಗಳೂರು, ಮೇ 23 (DaijiworldNews/PY) : ಪರೀಕ್ಷಾ ಕಾರ್ಯದಲ್ಲಿ ಪದವಿಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ಶಿಕ್ಷಕರು ತೊಡಗಿರುವ ಕಾರಣ ಅವರನ್ನು ಕೊರೊನಾ ಕರ್ತವ್ಯಗಳಿಂದ ಬಿಡುಗಡೆಗೊಳಿಸಬೇಕೆಂದು ಶಿಕ್ಷಣ ಸಚಿವರಿಗೆ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರು ಪತ್ರ ಬರೆದಿದ್ದಾರೆ.
ಕೊರೊನಾ ಹಿನ್ನಲೆ ರಾಜ್ಯದಲ್ಲಿ ಸರ್ಕಾರಿ, ಅನುದಾನಿತ, ಅನುದಾನರಹಿತ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಿಕ್ಷಕರು ಹಾಗೂ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಚೆಕ್ಪೋಸ್ಟ್, ಆರೋಗ್ಯ ಸಮೀಕ್ಷೆ ಹಾಗೂ ಇನ್ನಿತರ ಕಾರ್ಯಗಳಿಗೆ ನಿಯೋಜನೆ ಮಾಡಿಕೊಳ್ಳಲಾಗಿದೆ. ಇಲಾಖೆಯಿಂದ ಈಗಾಗಲೇ ಪ್ರೌಢಶಾಲಾ ಶಿಕ್ಷಕರನ್ನು ಎಸ್ಎಸ್ಎಲ್ಸಿ ಪರೀಕ್ಷೆ ಮತ್ತು ಪರೀಕ್ಷಾ ಕರ್ತವ್ಯ ನಿರ್ವಹಿಸುವಂತೆ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರನ್ನು ನಿರ್ದೇಶನ ನೀಡಲಾಗಿದೆ. ಅಲ್ಲದೇ, ಈಗಾಗಲೇ ದ್ವಿತೀಯ ಪಿಯುಸಿ ಮೌಲ್ಯಮಾಪನ ಕಾರ್ಯವನ್ನು ಪ್ರಾರಂಭ ಮಾಡಲಾಗಿದೆ.
ಕೊರೊನಾಗೆ ಸಂಬಂಧಪಟ್ಟ ಕಾರ್ಯಗಳಲ್ಲಿ ಇವರನ್ನು ತೊಡಗಿಸಿಕೊಳ್ಳುವ ಕಾರಣದಿಂದ ಇವರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಂಪರ್ಕಕ್ಕೆ ಬಂದು ಕೊರೊನಾ ಸೋಂಕಿಗೆ ಒಳಗಾಗುವ ಅಪಾಯವಿದ್ದು, ಈ ಕಾರಣದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಕೊರೊನಾ ಕರ್ತವ್ಯಗಳಿಂದ ಪ್ರೌಢಶಾಲೆ ಶಿಕ್ಷಕರು ಹಾಗೂ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರನ್ನು ಬಿಡುಗಡೆ ಮಾಡುವಂತೆ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕಾಗಿ ಮನವಿ ಮಾಡಿಕೊಳ್ಳುವುದಾಗಿ ಪುಟ್ಟಣ್ಣ ಅವರು ತಿಳಿಸದ್ದಾರೆ.