ಬೆಂಗಳೂರು, ಮೇ 23 (Daijiworld News/MB) : ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಕೊರೊನಾ ವಿರುದ್ಧವಾಗಿ ಹೋರಾಡುವ ನಿಟ್ಟಿನಲ್ಲಿ ಸರ್ವ ಪಕ್ಷದ ಸಭೆ ನಡೆಸಿದ್ದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿರುದ್ಧದ ಎಫ್ಐಆರ್ ಕೈ ಬಿಡುವುದಾಗಿಯೂ ಭರವಸೆ ನೀಡಿದ್ದರು. ಈ ಬೆಳವಣಗೆಯ ಬಗ್ಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದರೂ ಕೂಡಾ ಬಿಜೆಪಿ ಪಕ್ಷದೊಳಗೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ಸೋನಿಯಾ ವಿರುದ್ಧದ ಎಫ್ಐಆರ್ ಕೈ ಬಿಡಬೇಕೆಂದು ಒತ್ತಾಯಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ನೇತೃತ್ವದ ನಿಯೋಗ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದು ಸಿಎಂ ಕೂಡಾ ಎಫ್ಐಆರ್ ಕೈ ಬಿಡುವ ಭರವಸೆ ನೀಡಿದ್ದರು. ಆದರೆ ಇದಕ್ಕೇ ಬಿಜೆಪಿಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಯಾವುದೇ ಕಾರಣಕ್ಕೂ ಈ ಎಫ್ಐಆರ್ ಹಿಂದೆಗೆದುಕೊಳ್ಳಲಾಗದು ಎಂದು ಹೇಳಿದ್ದಾರೆ.
ಈ ಮೊದಲು ಕೊರೊನಾ ವೈರಸ್ನ ವಿಚಾರದಲ್ಲಿ ಕೋಮುವಾದ ಮಾಡುವವರ ವಿರುದ್ದ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದು ಇದರಿಂದಾಗಿ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಸೋನಿಯಾ ವಿರುದ್ಧದ ಎಫ್ಐಆರ್ ವಾಪಾಸ್ ಪಡೆಯುವುದಾಗಿ ಹೇಳಿ ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದ್ದಾರೆ.