ಉಡುಪಿ, ಮೇ 23 (Daijiworld News/MSP): ರಾಜ್ಯದಲ್ಲಿ ಲಾಕ್ ಡೌನ್ ಸಡಿಲಿಕೆ ಬೆನ್ನಲ್ಲೇ ಭಕ್ತರಿಗೆ ಆನ್ ಲೈನ್ ನಲ್ಲೇ ದೇವರ ದರ್ಶನ ಮಾಡಿಸಲು ವ್ಯವಸ್ಥೆ ಮುಜರಾಯಿ ಇಲಾಖೆ ಮುಂದಾಗಿದೆ. ಆದ್ರೆ ಇದಕ್ಕೆ ಕರಾವಳಿಯಲ್ಲಿ ವ್ಯಾಪಕ ಆಕ್ಷೇಪ ಕೇಳಿಬಂದಿದೆ. ಆನ್ಲೈನ್ ಸೇವೆಗಳಿಗೆ ಆಕ್ಷೇಪ ಕೇಳಿಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಲಾಕ್ಡೌನ್ ಕಾರಣದಿಂದ ಭಕ್ತರಿಗೆ ದೇವಾಲಯ ಹೋಗಿ ದರ್ಶನ ಮಾಡಲು ಸಾಧ್ಯವಾಗುತ್ತಿಲ್ಲ. ಹರಕೆ ಹೊತ್ತ ಭಕ್ತರಿಗೆ ಆನ್ಲೈನ್ ಸೇವೆಯಿಂದ ಅನುಕೂಲವಾಗಲಿದೆ. ಭಕ್ತರಿಗೆ ನೆಮ್ಮದಿ ಸಿಗಲಿ ಎಂಬ ಕಾರಣಕ್ಕೆ ಈ ಕಾರ್ಯ ಆರಂಭಿಸಿದ್ದೇವೆ. ಹೀಗಾಗಿ ಆಕ್ಷೇಪ ಸಲ್ಲದು ಎಂದು ಹೇಳಿದ್ದಾರೆ.
ಲಾಕ್ಡೌನ್ವರೆಗಾದರೂ ಆನ್ಲೈನ್ ಸೇವೆ ಅಗತ್ಯವಿದೆ ಭಕ್ತರ ವಿನಂತಿ ಮೇರೆಗೆ ಈ ಸೇವೆ ಆರಂಭಿಸಲಾಗಿದೆ. ಕೊಲ್ಲೂರು ದೇವಸ್ಥಾನದಲ್ಲಿ ಕಳೆದ ವರ್ಷ ಮೂರು ಸಾವಿರ ಆನ್ಲೈನ್ ಸೇವೆಗಳಿಗೆ ಆರ್ಡರ್ ಬಂದಿವೆ. ಮೈಸೂರು ಚಾಮುಂಡೇಶ್ವರಿ ದೇವಸ್ಥಾನದಲ್ಲೂ ಆನ್ಲೈನ್ ಸೇವೆಯಿದೆ. ಕಳೆದ ವರ್ಷ ಈ ಆನ್ಲೈನ್ ಸೇವೆಯಿಂದ 49.50 ಲಕ್ಷ ರುಪಾಯಿ ಆದಾಯ ಬಂದಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಆನ್ಲೈನ್ ಸೇವೆ ನಮ್ಮ ಇಲಾಖೆಯಲ್ಲಿ ಈ ಮೊದಲೇ ಇದೆ. ಈಗ ಮತ್ತಷ್ಟು ದೇವಸ್ಥಾನಗಳನ್ನು ಆನ್ಲೈನ್ ಸೇವೆಯ ವ್ಯಾಪ್ತಿಗೆ ಇಲಾಖೆ ತರಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.