ಕೋಲ್ಕತ್ತ, ಮೇ 23 (DaijiworldNews/PY) : ಪಶ್ಚಿಮ ಬಂಗಾಳವು ಅಂಫಾನ್ ಚಂಡಮಾರುತದಿಂದ ತತ್ತರಿಸಿದ್ದರೂ, ಸರ್ಕಾರವು ಸಹಜಸ್ಥಿತಿಗೆ ತರುವತ್ತ ನಿರ್ಲಕ್ಷ್ಯ ಮಾಡಿದೆ ಎಂದು ಬಂಗಾಳದ ಜನರು ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದ್ದಾರೆ.
ಪ್ರತಿಭಟನೆ ನಡೆಸಿದ ಜನರು, ಕೋಲ್ಕತ್ತದ ಕೆಲವೇ ಭಾಗಗಳಲ್ಲಿ ಮಾತ್ರವೇ ವಿದ್ಯುತ್ ಹಾಗೂ ಮೊಬೈಲ್ ಸಂಪರ್ಕವಿದ್ದು, ಹಲವಾರು ಪ್ರದೇಶಗಳು ವಿದ್ಯುತ್ ಇಲ್ಲದೆಯೇ ಕತ್ತಲಿನಲ್ಲಿ ಉಳಿದಿದೆ. ಉತ್ತರ, ದಕ್ಷಿಣ ಭಾಗ ಹಾಗೂ ಹೌರದ 24 ಪರಗಣ ಜಿಲ್ಲೆಗಳ ರಸ್ತೆಗಳು ಜಲಾವೃತಗೊಂಡಿದ್ದು, ಅದನ್ನು ಸರಿ ಮಾಡಲು ಸರ್ಕಾರ ಗಮನ ಹರಿಸುತ್ತಿಲ್ಲ. ವಿದ್ಯುತ್ ಹಾಗೂ ನೀರು ಪೂರೈಕೆ ಸಮರ್ಪಕವಾಗಿರುವಂತೆ ಕ್ರಮ ತೆಗೆದುಕೊಳ್ಳಲು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಕೋಲ್ಕತ್ತ ನಗರ ಆಡಳಿತ ಮಂಡಳಿಯ ಅಧ್ಯಕ್ಷ ಫಿರ್ಹಾದ್ ಹಕೀಂ ಮಾತನಾಡಿ, ಎಲ್ಲಾ ಸರ್ಕಾರಿ ಅಧಿಕಾರಿಗಳು, ವಾರದೊಳಗೆ ಜನಜೀವನವನ್ನು ಸಹಜಸ್ಥಿತಿಗೆ ತರುವಂತೆ ಶ್ರಮ ವಹಿಸಲಿದ್ದಾರೆ ಎಂದು ಆಶ್ವಾಸನೆ ನೀಡಿದ್ದಾರೆ.
ಅಂಫಾನ್ ಚಂಡಮಾರುತದ ಪರಿಣಾಮ ಸಾಮಾನ್ಯ ಜನಜೀವನವು ಅಸ್ತವ್ಯಸ್ತಗೊಂಡಿದ್ದು, ಪರಿಣಾಮ , 10 ಲಕ್ಷಕ್ಕೂ ಹೆಚ್ಚು ಮನೆಗಳು ನಾಶವಾಗಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.