ಬೆಂಗಳೂರು, ಮೇ 24 (DaijiworldNews/PY) : ಮೆಟ್ರೊ ರೈಲು ಸಂಚಾರ ಆರಂಭವಾದ ಬಳಿಕ ಯಾವ ರೀತಿಯಾಗಿ ಕಾರ್ಯನಿರ್ವಹಿಸಬೇಕು ಎನ್ನುವ ಬಗ್ಗೆ ಸಿಬ್ಬಂದಿಗೆ ತಿಳಿಸಿಕೊಡಲಾಗುತ್ತಿದೆ. ಜೂ.1ರಿಂದ ಸಂಚಾರ ಆರಂಭಿಸುವ ಸಾಧ್ಯತೆ ಇದೆ.
ಲಾಕ್ಡೌನ್ನ ಬಳಿಕದ ಕಾರ್ಯಚರಣೆಯ ಬಗ್ಗೆ ಬೆಂಗಳೂರು ಮೆಟ್ರೊ ರೈಲು ನಿಗಮದ ಭದ್ರತಾ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದ್ದು, ರೈಲು ಸಂಚಾರವನ್ನು ಜೂನ್ 1ರಿಂದ ಆರಂಭಿಸುವ ಸಾಧ್ಯತೆ ಇದೆ ಎಂದು ಸುದ್ದಿ ಸಂಸ್ಥೆಯೊಂದಕ್ಕೆ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಬಗ್ಗೆ ಶನಿವಾರ ಸಂಜೆ ಬಿ.ಆರ್. ಅಂಬೇಡ್ಕರ್ ಮೆಟ್ರೊ ನಿಲ್ದಾಣದ ಆವರಣದಲ್ಲಿ ಸಿಬ್ಬಂದಿಗೆ ಮಾಹಿತಿ ನೀಡಲಾಗುತ್ತಿತ್ತು.
ಮೆಟ್ರೊ ರೈಲಿನಲ್ಲಿ 60 ವರ್ಷ ಮೇಲ್ಪಟ್ಟವರು ಹಾಗೂ 10 ವರ್ಷ ವಯಸ್ಸಿನೊಳಗಿನವರಿಗೆ ಸಂಚಾರ ಮಾಡಲು ಅವಕಾಶ ನೀಡಲಾಗುವುದಿಲ್ಲ. ಪ್ರಯಾಣಿಕರಿಗೆಲ್ಲರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ. ಅಲ್ಲದೇ, ನಿಲ್ದಾಣದಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗುತ್ತದೆ. ಇನ್ನು ಒಂದು ಸಲಕ್ಕೆ ಗರಿಷ್ಠ 350 ಜನರಿಗೆ ಮಾತ್ರ ರೈಲಿನಲ್ಲಿ ಪ್ರಯಾಣ ಮಾಡಲು ಅವಕಾಶ. ಸಿಬ್ಬಂದಿಗಳಿಗೆ ಈ ವಿಚಾರವಾಗಿ ಮಾಹಿತಿ ನೀಡಲಾಗುತ್ತಿದೆ ಎಂದರು.
ಮೆಟ್ರೊ ರೈಲು ಸಂಚಾರ ನಿರ್ದಷ್ಟವಾಗಿ ಜೂ.1ರಿಂದಲೇ ಆರಂಭಿಸಲಾಗುತ್ತೆ ಎಂದು ಹೇಳಲಾಗದು. ಮೆಟ್ರೊ ಸಂಚಾರಕ್ಕೆ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ನಮಗೆ ಈ ವಿಚಾರವಾಗಿ ಕೇಂದ್ರ ಗೃಹ ಸಚಿವಾಲಯದಿಂದ ಯಾವುದೇ ನಿರ್ದೇಶನ ಬಂದಿಲ್ಲ. ಸದ್ಯಕ್ಕೆ ಮೇ 31ರವರೆಗೆ ಮೆಟ್ರೊ ರೈಲು ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಹೇಳಿದರು.