ನವದೆಹಲಿ, ಮೇ 24 (DaijiworldNews/PY) : ದೇಶದ ವಿವಿಧ ಭಾಗಗಳಲ್ಲಿ ಸುಮಾರು 4 ಕೋಟಿ ವಲಸೆ ಕಾರ್ಮಿಕರಿದ್ದು, ಈ ಪೈಕಿ ಸುಮಾರು 75 ಲಕ್ಷ ಜನರು ರೈಲು ಹಾಗೂ ಬಸ್ಗಳಲ್ಲಿ ತಮ್ಮ ಊರಿಗೆ ಮರಳಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಈ ವಿಚಾರವಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಪುಣ್ಯ ಸಲೀಲಾ ಶ್ರೀವಾಸ್ತವ ಅವರು, ಮೇ 1ರಿಂದ ದೇಶದ ವಿವಿಧ ಭಾಗಗಳಲ್ಲಿರುವ ವಲಸೆ ಕಾರ್ಮಿಕರನ್ನು ಅವರ ಊರಿಗೆ ಸಾಗಿಸಲು 2,600ಕ್ಕೂ ಅಧಿಕ ಶ್ರಮಿಕ್ ವಿಶೇಷ ರೈಲುಗಳನ್ನು ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
2011ರ ಜನಗಣತಿಯ ಪ್ರಕಾರ, ದೇಶದಲ್ಲಿ ಸುಮಾರು ನಾಲ್ಕು ಕೋಟಿ ವಲಸೆ ಕಾರ್ಮಿಕರಿದ್ದು, ಲಾಕ್ಡೌನ್ ಜಾರಿಯಾದ ಬಳಿಕ ಸುಮಾರು 75 ಲಕ್ಷ ವಲಸೆ ಕಾರ್ಮಿಕರು ತಮ್ಮ ಊರಿಗೆ ತೆರಳಿದ್ದಾರೆ. ಈ ಪೈಕಿ ಸುಮಾರು 35 ಲಕ್ಷ ಮಂದಿ ಶ್ರಮಿಕ್ ರೈಲುಗಳಲ್ಲಿ ತಮ್ಮ ಊರುಗಳಿಗೆ ತಲುಪಿದ್ದಾರೆ. ಇನ್ನುಳಿದಂತಹ 40 ಲಕ್ಷ ಮಂದಿ ಬಸ್ಗಳಲ್ಲಿ ತೆರಳಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರು ನಿಟ್ಟಿನಲ್ಲಿ ದೇಶದಾದ್ಯಂತ ಮಾ 24ರಿಂದ ಲಾಕ್ಡೌನ್ ಘೋಷಣೆ ಮಾಡಲಾಗಿದ್ದು, ಆ ಕಾರಣದಿಂದ ವಲಸೆ ಕಾರ್ಮಿಕರು ತೀವ್ರ ಸಂಕಷ್ಟಕ್ಕೊಳಪಟ್ಟಿದ್ದರು.