ಲಕ್ನೋ, ಮೇ 24 (Daijiworld News/MB) : ಲಾಕ್ಡೌನ್ ಕಾರಣದಿಂದಾಗಿ ಮೊದಲೇ ಗೊತ್ತಾಗಿದ್ದ ಹಲವು ವಿವಾಹಗಳು ರದ್ದು ಮಾಡಲಾಗಿದ್ದು ಕೆಲವರು ಸರಳವಾಗಿ ವಿವಾಹವಾಗಿದ್ದಾರೆ. ಇನ್ನೂ ಕೆಲವರು ಆನ್ಲೈನ್ ಮೂಲಕವೇ ವಿವಾಹವಾಗುವ ಮೂಲಕ ಸುದ್ದಿಯಾಗಿದ್ದಾರೆ. ಆದರೆ ಇಲ್ಲೊಬ್ಬಳು ಯುವತಿ ವಿವಾಹವಾಗಲೆಂದು 80 ಕಿ.ಮೀ ನಡೆದು ಬಂದಿದ್ದಾಳೆ.
ಮೇ.4ರಂದು 20 ವರ್ಷದ ಗೋಲ್ಡಿ ಮತ್ತು ವೀರೇಂದ್ರ ಕುಮಾರ್ ಅವರ ವಿವಾಹವು ನಿಶ್ಚಯವಾಗಿದ್ದು ಆದರೆ ಲಾಕ್ಡೌನ್ ಕಾರಣದಿಂದಾಗಿ ವಿವಾಹವನ್ನು ಮುಂದೂಡಲಾಗಿತ್ತು. ಆ ಬಳಿಕ ಎರಡನೇ ಬಾರಿ ನಿಗದಿ ಮಾಡಿದ ದಿನದಂದು ಕೂಡಾ ವಿವಾಹವನ್ನು ಮುಂದೂಡಲಾಗಿತ್ತು. ಇವೆಲ್ಲದರಿಂದ ಗೋಲ್ಡಿ ಮತ್ತು ವೀರೇಂದ್ರ ಕುಮಾರ್ ತೀರಾ ಅಸಮಾಧಾನಕ್ಕೊಳಗಾಗಿದ್ದರು.
ತಾನು ಹೇಗಾದರೂ ವಿವಾಹವಾಗಲೇ ಬೇಕು ಎಂದು ನಿರ್ಧರಿಸಿದ ಗೋಲ್ಡಿ ಬುಧವಾರ ಮಧ್ಯಾಹ್ನ ಕಾನ್ಪುರದ ಲಕ್ಷ್ಮಣಪುರ ತಿಲಕ್ ಗ್ರಾಮದಿಂದ ಕನೌಜ್ನ ಬೈಸಾಪುರದ ಬಳಿ ಇರುವ ವೀರೇಂದ್ರಕುಮಾರ್ ಅವರ ಮನೆಗೆ 80 ಕಿ.ಮೀ ಒಬ್ಬಂಟಿಯಾಗಿ ನಡೆದುಕೊಂಡು ಹೋಗಿದ್ದಾಳೆ.
ಲಾಕ್ಡೌನ್ ನಡುವೆಯೂ ಗೋಲ್ಡಿ ನಡೆದುಕೊಂಡೇ ಆಗಮಿಸಿದ್ದನ್ನು ಕಂಡ ವೀರೇಂದ್ರ ಅವರ ಕುಟುಂಬಸ್ಥರು ಅವರಿಬ್ಬರ ವಿವಾಹವನ್ನು ದೇವಾಲಯದಲ್ಲಿ ಸಾಮಾಜಿಕ ಅಂತರದೊಂದಿಗೆ ಮಾಡಿದ್ದಾರೆ.