ಬೆಂಗಳೂರು, ಮೇ 24 (DaijiworldNews/PY) : ಕರ್ನಾಟಕ ಡ್ರಗ್ ಲಾಜಿಸ್ಟಿಕ್ಸ್ ಮತ್ತು ವೇರ್ ಹೌಸಿಂಗ್ ಸೊಸೈಟಿ ಮೂಲಕ ಔಷಧ ಹಾಗೂ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಬಗ್ಗೆ ಪರಿಶೀಲನೆ ಮಾಡಿ, ಶೀಘ್ರವೇ ಸಮಗ್ರ ವರದಿ ನೀಡುವಂತೆ ವಿಧಾನಸಭೆ ಕಾರ್ಯದರ್ಶಿ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಕಳಪೆ ಗುಣಮಟ್ಟದ ಉಪಕರಣಗಳನ್ನು ಖರೀದಿ ಮಾಡಲಾಗಿದೆ. ಈ ಉಪಕರಣಗಳನ್ನು ದೂರು ಬಂದ ನಂತರ ಮರಳಿಸಲಾಗಿದೆ. ವೆಂಟಿಲೇಟರ್ಗಳ ಖರೀದಿ, ಪಿಪಿಇ ಕಿಟ್, ಗ್ಲುಕೋಸ್, ಕೊರೊನಾ ತಪಾಸಣಾ ಕಿಟ್ ಹಾಗೂ ಡಯಾಲಿಸಿಸ್ ಉಪಕರಣಗಳ ಮಾರಾಟದ ವೇಳೆ ಯಾವುದೇ ಮುಂಜಾಗ್ರತೆ ತೆಗೆದುಕೊಂಡಿಲ್ಲ. ಈ ಎಲ್ಲಾ ವಹಿವಾಟುಗಳು ಕರ್ನಾಟಕ ಡ್ರಗ್ ಲಾಜಿಸ್ಟಿಕ್ಸ್ ಮತ್ತು ವೇರ್ ಹೌಸಿಂಗ್ ಸೊಸೈಟಿ ಮೂಲಕ ನಡೆದಿದೆ. ಆದ ಕಾರಣ, ಈ ಸಂಸ್ಥೆಯ ವಹಿವಾಟಿನ ಲೆಕ್ಕ ನಡೆಸಿ, ಸರ್ಕಾರಕ್ಕೆ ಆಗಿರುವ ನಷ್ಟ ಹಾಗೂ ಇದಕ್ಕೆ ಕಾರಣವಾದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ದೀಪಕ್ ಉಲ್ಲೇಖಿಸಿದ್ದಾರೆ.
ಔಷಧ ಹಾಗೂ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಮೇ 12ರಂದು ಕರ್ನಾಟಕ ರಾಷ್ಟ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಸಿ.ಎನ್. ದೀಪಕ್ ಅವರು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ಅಧ್ಯಕ್ಷ ಎಚ್.ಕೆ. ಪಾಟೀಲ ಅವರಿಗೆ ದೂರು ಸಲ್ಲಿಸಿದ್ದರು. ಈ ಬಗ್ಗೆ ಮೇ 19ರಂದು ನಡೆದ ಸಮಿತಿಯ ಸಭೆಯಲ್ಲಿ ಚರ್ಚೆಯಾಗಿತ್ತು. ಈ ಹಿನ್ನೆಲೆ, ಸಮಿತಿ ಅಧ್ಯಕ್ಷರು ಕಾರ್ಯದರ್ಶಿಗೆ ಈ ಬಗ್ಗೆ ಮಾಹಿತಿ ಪಡೆದುಕೊಂಡು ಸಭೆಗೆ ಮಂಡಿಸುವಂತೆ ಸೂಚನೆ ನೀಡಿದ್ದರು.