ನವದೆಹಲಿ, ಮೇ 24 (Daijiworld News/MB) : ಸಿಕ್ಕಿಂ ದೇಶದ ಭಾಗವಲ್ಲ ಎಂಬಂತೆ ತಪ್ಪಾಗಿ ಉಲ್ಲೇಖಿಸಿದ್ದ ಸುದ್ದಿ ಪತ್ರಿಕೆಯ ಜಾಹೀರಾತಿಗೆ ಸಂಬಂಧಿಸಿ ನಾಗರಿಕ ರಕ್ಷಣೆ ಇಲಾಖೆ ಮಹಾ ನಿರ್ದೇಶಕರನ್ನು ಅಮಾನತು ಮಾಡಲಾಗಿದ್ದು ಈ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸ್ಪಷ್ಟೀಕರಣ ನೀಡಿದ್ದಾರೆ.
ಈ ಬಗ್ಗೆ ಶನಿವಾರ ಸಂಜೆ ಟ್ವೀಟ್ ಮಾಡಿರುವ ಕೇಜ್ರಿವಾಲ್, "ಸಿಕ್ಕಿಂ ಭಾರತದ ಅವಿಭಾಜ್ಯ ಅಂಗವಾಗಿದೆ. ಇಂತಹ ದೋಷಗಳನ್ನು ಸಹಿಸಲಾಗುವುದಿಲ್ಲ. ಜಾಹೀರಾತನ್ನು ಹಿಂಪಡೆಯಲಾಗಿದೆ ಮತ್ತು ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ" ಎಂದು ತಿಳಿಸಿದ್ದಾರೆ.
ದೆಹಲಿಯ ಪ್ರಮುಖ ಪತ್ರಿಕೆಗಳಲ್ಲಿ ಶನಿವಾರ ಪ್ರಕಟವಾದ ಜಾಹೀರಾತಿನಲ್ಲಿ ನಾಗರಿಕ ರಕ್ಷಣಾ ಪಡೆಗೆ ಕಾರ್ಯಕರ್ತರು ಸೇರುವಂತೆ ಕರೆ ನೀಡಲಾಗಿತ್ತು. ಇದಕ್ಕೆ ಸೇರಲಿಚ್ಛಿಸುವವರಿಗೆ ಅರ್ಹತೆಗಳೇನೇನು ಎಂದು ಪಟ್ಟಿ ಮಾಡಿದ ಸ್ಥಳದಲ್ಲಿ ಭಾರತೀಯ ಪ್ರಜೆಯಾಗಬೇಕಾಗಿದ್ದು ಭೂತಾನ್, ನೇಪಾಳ ಮತ್ತು ಸಿಕ್ಕಿಂನ ಪ್ರಜೆಗಳು ಅಥವಾ ದೆಹಲಿಯ ನಿವಾಸಿಗಳು ಎಂದು ಜಾಹೀರಾತಿನಲ್ಲಿ ಪ್ರಕಟವಾಗಿತ್ತು. ಸಿಕ್ಕಿಂನ್ನು ವಿದೇಶ ಎಂಬಂತೆ ಪ್ರಕಟ ಮಾಡಲಾಗಿತ್ತು.
ಈ ಜಾಹೀರಾತಿನ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಉಂಟಾಗಿದ್ದು ದೆಹಲಿ ಸರ್ಕಾರ ಈ ಜಾಹೀರಾತನ್ನು ಹಿಂತೆಗೆದುಕೊಳ್ಳಬೇಕೆಂದು ನೆಟ್ಟಿಗರು ಆಗ್ರಹಸಿದ್ದರು. ಸಿಕ್ಕಿಂ ಸರ್ಕಾರವೂ ಈ ಜಾಹೀರಾತನ್ನು ತಕ್ಷಣ ಹಿಂತೆಗೆದುಕೊಳ್ಳುವಂತೆ ದೆಹಲಿ ಸರ್ಕಾರಕ್ಕೆ ತಿಳಿಸಿದ್ದು ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿರುವ ದೆಹಲಿ ಮುಖ್ಯಮಂತ್ರಿ ಜಾಹೀರಾತನ್ನು ಹಿಂಪಡೆಯಲಾಗಿದೆ ಮತ್ತು ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.