ಬೆಂಗಳೂರು, ಮೇ 24 (Daijiworld News/MB) : 25 ಸಾವಿರ ನೀಡಿದ್ದಲ್ಲಿ ಕ್ವಾರಂಟೈನ್ ಇಲ್ಲದೆಯೇ ಮನೆಗೆ ಕಳುಹಿಸಿಕೊಡಲಾಗುವುದು ಎಂದು ಆಮಿಷವೊಡ್ಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಬ್ಯಾಟರಾಯನಪುರ ನಿವಾಸಿ ಕೃಷ್ಣೇಗೌಡ (55) ಗಾಂಧಿನಗರದ ದೀವಾ ಹೊಟೇಲ್ನಲ್ಲಿ ಕ್ವಾರಂಟೈನ್ನಲ್ಲಿರುವ ಕೆಲವರಲ್ಲಿ 25 ಸಾವಿರ ನೀಡಿದ್ದಲ್ಲಿ 14 ದಿನಗಳ ಮೊದಲೇ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಮನೆಗೆ ಕಳುಹಿಸಿಕೊಡಲಾಗುವುದು ಹೇಳಿದ್ದು ಈ ಬಗ್ಗೆ ವೈದ್ಯರಾದ ಬಿ.ವೈ. ನಂದಾ ಅವರು ದೂರು ನೀಡಿದ್ದರು.
ದೂರಿನಲ್ಲಿ "ಮೇ 18 ರಂದು 11ಕ್ಕೆ ಅನಧಿಕೃತವಾಗಿ ಹೊಟೇಲ್ ಪ್ರವೇಶ ಮಾಡಿದ ಕೃಷ್ಣೇಗೌಡ ಎಂಬವರು ಮೂರು ಜನರನ್ನು ಪರಿಚಯ ಮಾಡಿಕೊಂಡು ಕ್ವಾರಂಟೈನ್ ಆಗುವ ವೆಚ್ಚದ ಬಗ್ಗೆ ಮಾಹಿತಿ ಕೇಳಿದ್ದಾರೆ. ಈ ಸಂದರ್ಭದಲ್ಲಿ ಈ ಮೂವರು ದಿನಕ್ಕೆ 1400 ರೂಪಾಯಿ ಬಾಡಿಗೆಯಂತೆ 19,600 ಹಾಗೂ ವೈದ್ಯಕೀಯ ಪರೀಕ್ಷೆಗೆ 8 ಸಾವಿರ ನೀಡಬೇಕಾಗುತ್ತದೆ ಎಂದು ಹೇಳಿದ್ದು ಆ ಸಂದರ್ಭದಲ್ಲಿ ಕೃಷ್ಣೇ ಗೌಡ ತಮಗೆ 25 ಸಾವಿರ ನೀಡಿದ್ದಲ್ಲಿ ವೈದ್ಯಕೀಯ ಪರೀಕ್ಷೆ ಬಳಿಕ ಮನೆಗೆ ಕಳುಹಿಸಲಾಗುತ್ತದೆ ಎಂದು ಹೇಳಿದ್ದರು" ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿತ್ತು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ಅಧಿಕಾರಿಗಳು ವೈದ್ಯರಿಂದ ಪೊಲೀಸರಿಗೆ ದೂರು ನೀಡಿಸಿದ್ದಾರೆ.
ಮೇ 16ರಂದು ದೆಹಲಿಯಿಂದ ಬಂದಿರುವ 70 ಪ್ರಯಾಣಿಕರನ್ನು ಗಾಂಧಿನಗರದ ದೀವಾ ಹೊಟೇಲ್ನಲ್ಲಿ 14 ದಿನಗಳ ಕ್ವಾರಂಟೈನ್ನಲ್ಲಿ ಇಡಲಾಗಿದೆ.