ನಾಂದೇಡ್, ಮೇ 24 (Daijiworld News/MB) : ಈ ಹಿಂದೆ ಮಹಾರಾಷ್ಟ್ರದ ಪಾಲ್ಗರ್ನಲ್ಲಿ ಇಬ್ಬರು ಸಾಧುಗಳನ್ನು ಹೊಡೆದು ಹತ್ಯೆ ಮಾಡಲಾಗಿದ್ದು ಇದೀಗ ನಾಂದೇಡ್ ಜಿಲ್ಲೆಯ ಆಶ್ರಮವೊಂದರಲ್ಲಿ ಸಾಧುವೊಬ್ಬರನ್ನು ಹತ್ಯೆ ಮಾಡಲಾಗಿದ್ದು ಅವರು ಆಶ್ರಮದಲ್ಲಿ ಶನಿವಾರ ರಾತ್ರಿ ಶವವಾಗಿ ಪತ್ತೆಯಾಗಿದ್ದಾರೆ.
ಹತ್ಯೆಯಾದವರು ಕರ್ನಾಟಕ ಮೂಲದ ಶಿವಾಚಾರ್ಯ ನಿರ್ವಾಣರುದ್ರ ಪುಷ್ಪಪತಿನಾಥ ಮಹಾರಾಜ್ ಅವರಾಗಿದ್ದು ಈ ಸಾಧು ಹತ್ಯೆಯಾದ ಆಶ್ರಮದ ಶೌಚಾಲಯದಲ್ಲಿ ಮತ್ತೊಬ್ಬ ವ್ಯಕ್ತಿಯೂ ಕೊಲೆಯಾಗಿದ್ದಾನೆ ಎಂದು ಹೇಳಲಾಗಿದೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಎಸ್ಪಿ ವಿಜಯ್ ಕುಮಾರ್ ಮಾಗರ್ ಅವರು, ಹತ್ಯೆಯಾದ ಸಾಧು ಹಾಗೂ ಆರೋಪಿ ಒಂದೇ ಸಮುದಾಯದವರಾಗಿದ್ದು ಇನ್ನು ಈ ಪ್ರಕರಣಕ್ಕೂ ಧರ್ಮದ ಲೇಪ ಹಚ್ಚುವ ಯತ್ನ ಬೇಡ. ಇದರಲ್ಲಿ ಯಾವುದೇ ಧರ್ಮದ ಹಿನ್ನಲೆಯಿಲ್ಲ. ಆರೋಪಿಯು ಹತ್ಯೆಗೈದು ಪರಾರಿಯಾಗಿದ್ದು ಆತನ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಹೇಳಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಮಹಾರಾಷ್ಟ್ರದ ಕೆಲವು ಸುದ್ದಿ ವಾಹಿನಿಗಳು ಈ ಬಗ್ಗೆ ವರದಿ ಮಾಡಿದ್ದು ಯುವಕನೊಬ್ಬ ಆಶ್ರಮದಲ್ಲಿ ಲೂಟಿ ಮಾಡುವ ಸಂದರ್ಭದಲ್ಲಿ ಇಬ್ಬರ ಹತ್ಯೆಗೈದಿದ್ದಾನೆ ಎಂದು ತಿಳಿಸಿದೆ.
ಈ ಹಿಂದೆ ಏ.19ರ ರಾತ್ರಿ ಮಹಾರಾಷ್ಟ್ರದ ಪಾಲ್ಗರ್ನಲ್ಲಿ ಸಾಧುಗಳಿಬ್ಬರನ್ನು ಮಕ್ಕಳನ್ನು ಕಳವು ಮಾಡಲು ಬಂದವರೆಂದು ಭಾವಿಸಿ ಸ್ಥಳೀಯರು ಪೊಲೀಸರ ಎದುರೇ ಹೊಡೆದು ಹತ್ಯೆಗೈದಿದ್ದು ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮೊದಲು 101 ಜನರನ್ನು ಬಂಧಿಸಿದ್ದು ಇತ್ತೀಚೆಗೆ ಮತ್ತೆ ಐವರನ್ನು ಬಂಧಿಸಿದ್ದಾರೆ.