ಬಳ್ಳಾರಿ, ಮೇ 24 (DaijiworldNews/PY) : ಜೂನ್ ಹಾಗೂ ಜುಲೈ ತಿಂಗಳಲ್ಲಿ ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಿಸುವ ಮುನ್ಸೂಚನೆ ಇದ್ದು, ಜಿಲ್ಲೆಗಳಲ್ಲಿ ಓಪನ್ ಆಸ್ಪತ್ರೆಗಳ ಪ್ರಾರಂಭಕ್ಕೆ ಚಿಂತನೆ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಕ್ರೀಡಾಂಗಣ, ಮೈದಾನದಂತಹ ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ಓಪನ್ ಆಸ್ಪತ್ರೆಯ ವ್ಯವಸ್ಥೆಗೆ ಸಿದ್ದತೆ ನಡೆಸಲಾಗುತ್ತಿದೆ. ಈ ವಿಚಾರವಾಗಿ ಕಾರ್ಯಪಡೆ ಸಭೆಯ ಸಂದರ್ಭ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳಲಾಗುವುದು, ಅಲ್ಲದೇ ಗ್ರಾಮೀಣ ಭಾಗಗಳಿಗೂ ಸೋಂಕು ವ್ಯಾಪಿಸದಂತೆ ನಿಯಂತ್ರಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಆಯುಷ್ ವೈದ್ಯರ ಬೇಡಿಕೆ ನ್ಯಾಯಸಮ್ಮತವಾದುದು. ಸರ್ಕಾರದ ಹಂತದಲ್ಲಿ ಈ ವಿಚಾರವಾಗಿ ಚರ್ಚೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು. ಎಂಬಿಬಿಎಸ್ ವೈದ್ಯರಂತೆ ಆಯುಷ್ ವೈದ್ಯರ ವೇತನ ತಾರತಮ್ಯ ನಿವಾರಿಸುವ ಬಗ್ಗೆ ಮಂಗಳವಾರ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳಲಾಗುವುದು. ಎಂಬಿಬಿಎಸ್ ಹಾಗೂ ಆಯುಷ್ ವೈದ್ಯರ ನಡುವೆ ಯಾವುದೇ ತಾರತಮ್ಯ ಮಾಡುವುದಿಲ್ಲ ಎಂದರು.