ಬೆಳಗಾವಿ, ಮೇ 24 (Daijiworld News/MB) : ಪ್ರಯಾಣಿಕರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಜೂನ್ 1 ರಿಂದ ಹೆಚ್ಚಿನ ರೈಲುಗಳ ವ್ಯವಸ್ಥೆ ಮಾಡಲಾಗುವುದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ತಿಳಿಸಿದರು.
ಈ ಕುರಿತಾಗಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 10 ದಿನಗಳಲ್ಲಿ 2,600 ರೈಲುಗಳು ಸಂಚಾರ ಮಾಡಲಿದ್ದು ಒಟ್ಟು 36ಲಕ್ಷ ಶ್ರಮಿಕ ಸಹೋದರರನ್ನು ಅವರ ಊರಿಗೆ ತಲುಪಿಸಲಾಗುವುದು ಎಂದು ತಿಳಿಸಿದ್ದಾರೆ.
ಈಗಾಗಲೇ 31 ಲಕ್ಷಕ್ಕೂ ಅಧಿಕ ಶ್ರಮಿಕರನ್ನು ರಾಜ್ಯಗಳಿಗೆ ಕಳುಹಿಸಲಾಗಿದ್ದು ರಾಜ್ಯಗಳ ಒಳಗೆ ರೈಲು ಓಡಿಸಲು ಆಯಾ ಸರ್ಕಾರಗಳ ಸಮ್ಮತಿ ಮೇರೆಗೆ ಕ್ರಮ ವಹಿಸಲಾಗಿದೆ ಎಂದು ಹೇಳಿದ್ದಾರೆ.
ಪ್ರಾಯೋಗಿಕವಾಗಿ ಬೆಂಗಳೂರಿನಿಂದ ಮೈಸೂರು ಹಾಗೂ ಬೆಳಗಾವಿಗೆ ರೈಲು ಸಂಚಾರ ಮಾಡುತ್ತಿದ್ದು ಹೆಚ್ಚಿನ ಪ್ರಯಾಣಿಕರು ಸಂಚಾರ ಮಾಡುತ್ತಿಲ್ಲ. ಮಾಹಿತಿಯ ಕೊರತೆಯಿಂದಾಗಿ ಪ್ರಯಾಣಿಕರು ಕಡಿಮೆಯಾಗಿರಬಹುದು. ಮುಂದೆ ಖಾಯಂ ಆಗಿ ರೈಲು ಸಂಚರಿಸಲಿದೆ ಎಂದು ತಿಳಿದಾಗ ಜನರ ಸಂಖ್ಯೆ ಹೆಚ್ಚಾಗಬಹುದು ಎಂದು ಹೇಳಿದ್ದಾರೆ.
ಹಾಗೆಯೇ ಜನರು ಪ್ರಯಾಣ ಮಾಡುವ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು ಎಂದು ತಿಳಿಸಿದ್ದಾರೆ.