ನವದೆಹಲಿ, ಮೇ 25 (Daijiworld News/MB) : ಸೋಮವಾರದಿಂದ ದೇಶೀಯ ವಿಮಾನಯಾನ ಸೇವೆ ಭಾಗಶಃ ಪ್ರಾರಂಭವಾಗಲಿದ್ದು ಕೆಲವು ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವು ರಾಜ್ಯಗಳು "ನಾವಿನ್ನೂ ಸಿದ್ಧವಾಗಿಲ್ಲ" ಎಂದು ಹೇಳಿದೆ. ಇನ್ನು ಕೆಲವು ರಾಜ್ಯಗಳು ಪ್ರಯಾಣಿಕರಿಗಾಗಿ ಯಾವ ನಿಯಮಾವಳಿ ಇನ್ನೂ ರೂಪಿಸಿಲ್ಲ. ಇವೆಲ್ಲದರ ನಡುವೆ ಕೆಲವು ವಿಮಾನಯಾನ ಸಂಸ್ಥೆಗಳು ಟಿಕೆಟ್ ಬುಕಿಂಗ್ ಆರಂಭಿಸಿವೆ.
ಇನ್ನು ಮಹಾರಾಷ್ಟ್ರ ಸರ್ಕಾರವೂ ವಿಮಾನಯಾನ ಆರಂಭಿಸಲು ವಿರೋಧ ವ್ಯಕ್ತಪಡಿಸಿದ್ದು ತುರ್ತು ಅಗತ್ಯಗಳಿಗಾಗಿ 25 ವಿಮಾನಗಳ ಹಾರಾಟಕ್ಕೆ ಸೋಮವಾರದಿಂದ ಅನುಮತಿ ನೀಡುವುದಾಗಿ ಹೇಳಿದೆ.ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಸಿದ್ಧತೆಗೆ ನಮಗೆ ಇನ್ನಷ್ಟು ಸಮಯ ಬೇಕಾಗಿದೆ. ಈ ನಿಟ್ಟಿನಲ್ಲಿ ಕೆಲವು ವಿಮಾನಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಕೇಂದ್ರದ ವಿಮಾನಯಾನ ಸಚಿವರಲ್ಲಿ ತಿಳಿಸಿದ್ದೇನೆ. ಲಾಕ್ಡೌನ್ನಿಂದಾಗಿ ಸಿಲುಕಿರುವ ವಿದ್ಯಾರ್ಥಿಗಳಿಗೆ ಮತ್ತು ವೈದ್ಯಕೀಯ ತುರ್ತು ಇರುವವರಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಹೇಳಿದ್ದಾರೆ.
ಇನ್ನು ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವಾಗ ವಿಮಾನ ಯಾನ ಆರಂಭಿಸುವುದು ಸರಿಯಲ್ಲ ಎಂದು ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸಿದರೆ ಪಶ್ಚಿಮ ಬಂಗಾಳ ಸರ್ಕಾರ ಚಂಡಮಾರುತದಿಂದಾಗಿ ಹಾನಿಗೊಳಗಾಗಿರುವ ಕೋಲ್ಕತ್ತ ವಿಮಾನ ನಿಲ್ದಾಣ ಸಹಜ ಸ್ಥಿತಿಗೆ ಬರಲು ಇನ್ನೂ ಕೆಲವು ದಿನಗಳು ಬೇಕಾಗುತ್ತವೆ. ಅಲ್ಲಿಯವರೆಗೆ ಸೇವೆ ಆರಂಭಿಸುವುದು ಬೇಡ ಎಂದು ಹೇಳಿದೆ.
ಇನ್ನು ಸೋಮವಾರದಿಂದ ವಿಮಾನ ಹಾರಾಟಕ್ಕೆ ಅನುಮತಿ ನೀಡುವುದಾಗಿ ಕೇಂದ್ರ ಸರ್ಕಾರ ಹೇಳಿದ್ದರಿಂದ ಇಂಡಿಗೋ, ಸ್ಪೈಸ್ ಜೆಟ್, ಏರ್ ಏಷ್ಯಾ ಇಂಡಿಯಾ ಹಾಗೂ ವಿಸ್ತಾರ ಸಂಸ್ಥೆಗಳು ಟಿಕೆಟ್ ಬುಕ್ಕಿಂಗ್ ಆರಂಭ ಮಾಡಿದ್ದು ಯಾವ ರಾಜ್ಯಗಳು ಅನುಮತಿ ನೀಡುತ್ತದೆ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲದ ಹಿನ್ನಲೆಯಲ್ಲಿ ಗೊ ಏರ್ ಸಂಸ್ಥೆ ಇನ್ನು ಟಿಕೆಟ್ ಬುಕ್ಕಿಂಗ್ ಆರಂಭ ಮಾಡಿಲ್ಲ.