ನವದೆಹಲಿ, ಮೇ 25 (Daijiworld News/MB) : ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಉಷ್ಣಾಂಶ 45 ಡಿಗ್ರಿ ದಾಟಿದ್ದು ಈ ಹಿನ್ನಲೆಯಲ್ಲಿ ದೆಹಲಿ, ಪಂಜಾಬ್, ಹರಿಯಾಣ, ಚಂಡೀಗಡ ಮತ್ತು ರಾಜಸ್ತಾನದಲ್ಲಿ ಮುಂದಿನ 2 ದಿನಗಳ ಕಾಲ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಈ ಕುರಿತಾಗಿ ಮಾಹಿತಿ ನೀಡಿರುವ ಐಎಂಡಿಯ ಪ್ರಾದೇಶಿಕ ಹವಾಮಾನ ಇಲಾಖೆಯ ಮುಖ್ಯಸ್ಥ ಕುಲ್ದೀಪ್ ಶ್ರೀವಾಸ್ತವ್, ಉತ್ತರ ಭಾರತದಲ್ಲಿ ಈ ಬಾರಿ ಏಪ್ರಿಲ್ ತಿಂಗಳಲ್ಲಿ ಮಳೆಯಾದ ಕಾರಣದಿಂದಾಗಿ ತಾಪಮಾನ ಸಾಮಾನ್ಯವಾಗಿತ್ತು. ಆದರೆ ರಾಜಸ್ತಾನದ ಪಿಲಣಿಯಲ್ಲಿ ಶನಿವಾರ 46.7 ಡಿಗ್ರಿ ಉಷ್ಣಾಂಶ ದಾಖಲಾಗಿದೆ, ಇನ್ನು ಉತ್ತರ ಪ್ರದೇಶದ ಈಶಾನ್ಯ ಭಾಗದಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಮುಂದಿನ ಎರಡು ದಿನಗಳಲ್ಲಿ ಉಷ್ಣಾಂಶ 47 ಡಿಗ್ರಿ ದಾಟಲಿದೆ. ಇದೇ ಮೊದಲ ಬಾರಿಗೆ ಈ ಬಾರಿಯ ಬೇಸಿಗೆಯಲ್ಲಿ ಉಷ್ಣಾಂಶ ಏರಿಕೆಯಿಂದಾಗಿ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.
ಹಾಗೆಯೇ ಕರ್ನಾಟಕದ ಉತ್ತರ ಒಳನಾಡು ಪ್ರದೇಶಗಳ ಅಲ್ಲಲ್ಲಿ, ಮಧ್ಯ ಮಹಾರಾಷ್ಟ್ರ ಮತ್ತು ವಿದರ್ಭ, ಆಂಧ್ರಪ್ರದೇಶದ ಕರಾವಳಿ ಭಾಗ, ಚತ್ತೀಸಗಡ, ಒಡಿಶಾ, ಗುಜರಾತ್, ರಾಯಲಸೀಮಾ, ಯಾಣದಲ್ಲಿ ಮುಂದಿನ 3–4 ದಿನಗಳಲ್ಲಿ ಬಿಸಿಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.