ಲಖನೌ, ಮೇ 25 (Daijiworld News/MB) : ಉತ್ತರ ಪ್ರದೇಶದಲ್ಲಿ ವಲಸೆ ಕಾರ್ಮಿಕರನ್ನು ಕರೆದೊಯ್ಯಬೇಕಾದ್ದಲ್ಲಿ ಬೇರೆ ಯಾವುದೇ ರಾಜ್ಯಗಳು ಸರ್ಕಾರದ ಅನುಮತಿ ಪಡೆಯಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ತಿಳಿಸಿದ್ದಾರೆ.
ಬೇರೆ ರಾಜ್ಯಕ್ಕೆ ಕರೆದೊಯ್ಯಲಾಗುವ ನಮ್ಮ ರಾಜ್ಯದ ಕಾರ್ಮಿಕರ ಸಾಮಾಜಿಕ ಅಂತರ, ಕಾನೂನು ಕ್ರಮ ಹಾಗೂ ಅವರ ಆರ್ಥಿಕ ಹಕ್ಕುಗಳ ಕುರಿತಾಗಿ ನಾವು ತಿಳಿಯಬೇಕಾಗಿದೆ. ಯಾಕೆಂದರೆ ಪ್ರಸ್ತುತ ಜಾರಿಯಲ್ಲಿರುವ ಲಾಕ್ಡೌನ್ ಆರಂಭವಾದ ಸಂದರ್ಭದಿಂದ ಸಂಕಷ್ಟದಲ್ಲಿರುವ ಉತ್ತರ ಪ್ರದೇಶದ ವಲಸೆ ಕಾರ್ಮಿಕರನ್ನು ವಿವಿಧ ರಾಜ್ಯಗಳು ಉತ್ತಮ ರೀತಿಯಲ್ಲಿ ನಡೆಸಿಕೊಂಡಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಈ ವಲಸೆ ಕಾರ್ಮಿಕರು ನಮ್ಮವರು. ಅವರಿಗೆ ಉದ್ಯೋಗ ಒದಗಿಸಿಕೊಡುವಲ್ಲಿ ನಾವು ಬದ್ಧ. ನಮ್ಮ ರಾಜ್ಯದ ಬಹುದೊಡ್ಡ ಸಂಪನ್ಮೂಲ ನಮ್ಮ ವಲಸೆ ಕಾರ್ಮಿಕರು. ಅವರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಆಯೋಗವೊಂದನ್ನು ರಚನೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ವಲಸೆ ಕಾರ್ಮಿಕರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಎಲ್ಲಾ ವಲಸೆ ಕಾರ್ಮಿಕರ ಅಭಿಪ್ರಾಯಗಳನ್ನು ಸಂಗ್ರಹ ಮಾಡಲಾಗುತ್ತಿದ್ದು ಅವರ ಕೌಶಲ್ಯವನ್ನು ಗುರುತಿಸಿ ಅದನ್ನು ದಾಖಲು ಮಾಡಲಾಗುತ್ತಿದೆ. ಎಲ್ಲಾ ವಲಸೆ ಕಾರ್ಮಿಕರ ನೋಂದಣಿ ಮಾಡಿಸಿಕೊಳ್ಳಲಾಗುತ್ತಿದೆ. ಇನ್ನು ನಮ್ಮ ರಾಜ್ಯದಿಂದ ವಲಸೆ ಕಾರ್ಮಿಕರನ್ನು ಕರೆದೊಯ್ಯಬೇಕಾದ್ದಲ್ಲಿ ಬೇರೆ ರಾಜ್ಯಗಳು ಅವರಿಗೆ ಒದಗಿಸುವ ಆರ್ಥಿಕ ಭದ್ರತೆ, ಸಾಮಾಜಿಕ ಅಂತರಗಳ ಬಗ್ಗೆ ಖಾತರಿಪಡಿಸಬೇಕು ಎಂದು ತಿಳಿಸಿದ್ದಾರೆ.