ನವದೆಹಲಿ, ಮೇ 25 (DaijiworldNews/PY) : 100 ವಾಟ್ನ ಬಲ್ಬ್ ಬಳಕೆ ಮಾಡುವ ವಿಚಾರದಲ್ಲಿ ಜಗಳವಾಗಿ ಮನೆ ಮಾಲೀಕನೋರ್ವ ಬಾಡಿಗೆದಾರನನ್ನು ಹತ್ಯೆ ಮಾಡಿರುವ ಘಟನೆ ಈಶಾನ್ಯದ ದೆಹಲಿಯ ಹರ್ಷ ವಿಹಾರ್ ಎಂಬಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಜಗದೀಶ್ ಎಂದು ಗುರುತಿಸಲಾಗಿದೆ.
ಮೃತ ಜಗದೀಶ್ ರಿಕ್ಷಾ ಚಾಲಕನಾಗಿದ್ದು, ಪತ್ನಿ ಹಾಗೂ ಎಂಟು ವರ್ಷದ ಮಗಳೊಂದಿಗೆ ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದರು. ಗ್ರೌಂಡ್ ಪ್ಲೋರ್ನಲ್ಲಿ ಮಾಲೀಕ ಅಮಿತ್ ಹಾಗೂ ಆತನ ಕುಟುಂಬದವರು ವಾಸವಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾತ್ರಿ 7.45ರ ಸಂದರ್ಭ ಜಗದೀಶ್ ಮನೆಗೆ ಬಂದ ಮಾಲೀಕ 100 ವ್ಯಾಟ್ನ ಬಲ್ಬ್ ಬಳಕೆ ಮಾಡುವುದಕ್ಕೆ ಆಕ್ಷೇಪಿಸಿದ್ದಾರೆ. 100 ವ್ಯಾಟ್ನ ಬಲ್ಬ್ ಉಪಯೋಗಿಸಿದರೆ ಜಾಸ್ತಿ ವಿದ್ಯುತ್ ವ್ಯಯವಾಗುತ್ತದೆಂದು ಆ ಬಲ್ಬ್ ಅನ್ನು ಬದಲಾಯಿಸಿ ಎಲ್ಇಡಿ ಬಲ್ಬ್ ಅಳವಡಿಸಿದ್ದಾರೆ. ನಂತರ ಈ ವಿಚಾರದ ಬಗ್ಗೆ ಮಾಲೀಕ ಹಾಗೂ ಜಗದೀಶ್ ನಡುವೆ ಮಾತಿಗೆ ಮಾತು ಬೆಳೆದು ಅಮಿತ್ ಜಗದೀಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭ ಜಗದೀಶ್ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಕೂಡಲೇ ಜಗದೀಶ್ ಅವರನ್ನು ಅವರ ಪತ್ನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರಾದರೂ ಚಿಕಿತ್ಸೆ ಫಲಕಾರಿಯಾಗದೆ ಜಗದೀಶ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.