ಬೆಂಗಳೂರು, ಮೇ 25(Daijiworld News/MSP): ರಾಜ್ಯದಲ್ಲಿ ಸೋಮವಾರ 69 ಹೊಸ ಕೋವಿಡ್ -೧೯ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2158ಕ್ಕೆ ಏರಿಕೆಯಾಗಿದೆ. ಇಂದು ಒಂದೇ ದಿನ 26 ಮಂದಿ ರೋಗದಿಂದ ಗುಣಮುಖವಾಗುವುದರ ಮೂಲಕ ರಾಜ್ಯದಲ್ಲಿ ಈವರೆಗೆ ಕೊರೊನಾ ಸೋಂಕಿನಿಂದ ಗುಣಮುಖವಾಗಿರುವವರ ಸಂಖ್ಯೆ 680ಕ್ಕೆ ಏರಿಕೆಯಾಗಿದೆ.
ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಮಧ್ಯಾಹ್ನದ ಬುಲೆಟಿನ್ ಪ್ರಕಾರ, ಯಾದಗಿರಿ 15, ಉಡುಪಿ 16, ಬೆಂಗಳೂರು 6, ಮಂಡ್ಯ 2, ಬೆಳಗಾವಿ 1, ದಕ್ಷಿಣ ಕನ್ನಡ 3, ಕೋಲಾರ 2, ತುಮಕೂರು 1, ವಿಜಯಪುರ 1, ಬೀದರ್ 1, ಕಲಬುರಗಿ 14, ಬಳ್ಳಾರಿ 3, ಧಾರವಾಡ 3, ರಾಮನಗರ 1 ಸೇರಿದಂತೆ 69 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಎಲ್ಲರನ್ನೂ ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋಂಕಿತರಲ್ಲಿ 52 ಮಂದಿ ಮಹಾರಾಷ್ಟ್ರದಿಂದ ಹಿಂದಿರುಗಿದವರಾಗಿದ್ದು, 3 ಮಂದಿ ವಿದೇಶದಿಂದ ವಾಪಸಾದವರಾಗಿದ್ದಾರೆ. ಮತ್ತೊಬ್ಬರು ತಮಿಳುನಾಡಿನಿಂದ ಬಂದವರಾಗಿದ್ದಾರೆ. ಇವರಲ್ಲಿ 9 ಮಂದಿ ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಇನ್ನುಳಿದವರಲ್ಲಿ ಸೋಂಕಿತರ ಸಂಪರ್ಕದಿಂದ ರೋಗ ತಗುಲಿದೆ.