ಲಕ್ನೋ, ಮೇ 25 (DaijiworldNews/PY) : ಮದ್ಯ ಖರೀದಿ ಮಾಡಲು ಹಣ ನೀಡದ ಕಾರಣ ಮಗನೇ ತಂದೆಯ ಕತ್ತು ಹಿಸುಕಿ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಹತ್ಯೆಯಾಗಿರುವ ವ್ಯಕ್ತಿಯನ್ನು ಮಹೇಂದ್ರ ಸಿಂಗ್ (52) ಎಂದು ಗುರುತಿಸಲಾಗಿದೆ.
ಮಹೇಂದ್ರ ಸಿಂಗ್ ಕಿರಿಯ ಮಗ ವಿಕ್ಕಿ ಮದ್ಯೆ ಖರೀದಿ ಮಾಡಲು ತಂದೆ ಹಣ ಕೊಟ್ಟಿಲ್ಲ ಎಂಬ ಕಾರಣದಿಂದ ಜಗಳ ಮಾಡಿ ತಂದೆಯ ಕತ್ತು ಹಿಸುಕಿ ಹತ್ಯೆ ಮಾಡಿದ್ದು, ಬಳಿಕ ಶವವನ್ನು ಮನೆಯಲ್ಲಿದ್ದ ಪೆಟ್ಟಿಗೆಯೊಂದರಲ್ಲಿ ಮುಚ್ಚಿಟ್ಟಿದ್ದಾನೆ. ಈ ಸಂದರ್ಭ ಕೆಲಸದ ಮೇರೆಗೆ ಹೊರಗಡೆ ಹೋಗಿದ್ದ ಮಹೇಂದ್ರ ಸಿಂಗ್ ಪತ್ನಿ ಮನೆಗೆ ಬಂದಿದ್ದು, ಪೆಟ್ಟಿಗೆ ತೆರೆದಿದ್ದಾಳೆ. ಪೆಟ್ಟಿಗೆಯೊಳಗೆ ಪತಿಯ ಮೃತದೇಹವನ್ನು ನೋಡಿದ ಆಕೆ ಜೋರಾಗಿ ಕಿರುಚಿಕೊಂಡಿದ್ದಾಳೆ. ಆ ವೇಳೆ ಅಲ್ಲಿಗೆ ಅವರ ಕುಟುಂಬಸ್ಥರು ಹಾಗೂ ನೆರೆಹೊರೆಯವರು ಧಾವಿಸಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ವಿಕ್ಕಿಯನ್ನು ಬಂಧಿಸಿದ್ದಾರೆ.
ವಿಕ್ಕಿ ಎಷ್ಟೇ ಕೇಳಿಕೊಂಡರೂ ಮಹೇಂದ್ರ ಸಿಂಗ್ ಆತನಿಗೆ ಮದ್ಯ ಖರೀದಿ ಮಾಡಲು ಹಣ ನೀಡಿಲ್ಲ. ಈ ವೇಳೆ ಮಹೇಂದ್ರ ಪತ್ನಿ ಭಾಗವತಿ ಯಾವುದೇ ಕೆಲಸದ ನಿಮಿತ್ತ ಮನೆಯಿಂದ ಹೊರ ಹೋಗಿದ್ದಾರೆ. ಈ ಸಂದರ್ಭ ತಂದೆಯೊಂದಿಗೆ ಜಗಳವಾಡಿದ ವಿಕ್ಕಿ ತಂದೆಯ ಕತ್ತು ಹಿಸುಕಿ ಹತ್ಯೆ ಮಾಡಿ ಬಳಿಕ ಮೃತದೇಹವನ್ನು ಪೆಟ್ಟಿಗೆ ಒಳಗೆ ಮುಚ್ಚಿಟ್ಟಿದ್ದಾನೆ. ಈ ಸಂದರ್ಭ ಆರೋಪಿ ವಿಕ್ಕಿಯ ಪತ್ನಿ ಹಾಗೂ ಆತನ ನಾಲ್ಕು ವರ್ಷದ ಹೆಣ್ಣು ಮಗು ಮನೆಯಲ್ಲೇ ಇದ್ದರು ಎಂದು ಎಸ್ಪಿ ಅಮಿತ್ ಆನಂದ್ ಮಾಹಿತಿ ನೀಡಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ನೀಡಿರುವ ಎಸ್ಪಿ ಅಮಿತ್ ಆನಂದ್, ಹತ್ಯೆಯಾಗಿರುವ ಮಹೇಂದ್ರ ಸಿಂಗ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಒಬ್ಬ ವಿಕ್ಕಿ ಹಾಗೂ ಇನ್ನೊಬ್ಬ ಬಂಟಿ. ಇವರಿಬ್ಬರೂ ತರಕಾರಿ ವ್ಯಾಪಾರಿಗಳಾಗಿದ್ದಾರೆ. ಹಿರಿಯ ಮಗ ಬಂಟಿ ತರಕಾರಿ ವ್ಯಾಪಾರಕ್ಕೆಂದು ಹೋದ ಸಂದರ್ಭ, ಕಿರಿಯ ಮಗ ಬಂಟಿ ಮದ್ಯ ಖರೀದಿ ಮಾಡಲು ಹಣ ಕೇಳಿದ್ದು, ಅವರ ತಂದೆಯೊಂದಿಗೆ ಜಗಳವಾಡಿದ್ದಾನೆ ಎಂದು ಆರೋಪಿ ವಿಕ್ಕಿಯ ತಾಯಿ ಭಾಗವತಿ ಹೇಳಿದ್ದಾರೆ.