ಕೋಲ್ಕತ್ತ, ಮೇ 25 (Daijiworld News/MB) : ಪಶ್ಚಿಮ ಬಂಗಾಳದಲ್ಲಿ ಬುಧವಾರ ಅಂಫಾನ್ ಚಂಡಮಾರುತದಿಂದಾಗಿ ಭಾರೀ ಪ್ರಾಣ ಹಾನಿ ಉಂಟಾಗಿದ್ದು ಈ ಮಧ್ಯೆ ಮಹಿಳೆಯೊಬ್ಬರು ಮರವನ್ನು ಏರಿ 8 ಗಂಟೆಗಳ ಕಾಲ ಮರದಲ್ಲೇ ಕುಳಿತು ತನ್ನ ಜೀವವನ್ನು ಉಳಿಸಿಕೊಂಡಿದ್ದಾರೆ.
ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಇಲ್ಲಿನ ಬೈನಾರ ಗ್ರಾಮದಲ್ಲಿ ಗುಡಿಸಲೊಂದರಲ್ಲಿ ವಾಸವಾಗಿದ್ದ ಹಿರಿಯ ನಾಗರಿಕರಾದ ಅಂಜಲಿ ಬೈದ್ಯ ಮತ್ತು ನಿರಂಜನ್ ಬೈದ್ಯ ಅಂಫಾನ್ನಿಂದ ಜೀವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸುರಕ್ಷಿತವಾದ ಸ್ಥಳಕ್ಕೆ ಹೋಗಲು ನಿರ್ಧಾರ ಮಾಡಿದ್ದರು. ಆದರೆ ಅಷ್ಟರಲ್ಲೇ ಗುಡಿಸಲ ಪಕ್ಕದಲ್ಲಿದ್ದ ದಸ ನದಿಯು ಉಕ್ಕಿ ನದಿ ನೀರು ಗುಡಿಸಲಿಗೆ ಬಂದು ಬಿಟ್ಟಿತ್ತು.
ನದಿ ನೀರು ಗುಡಿಸಲಿಗೆ ಅಪ್ಫಳಿಸಿದ ರಭಸಕ್ಕೆ ಗುಡಿಸಲು ಕೊಚ್ಚಿಹೋಗಿದ್ದು ಈ ಸಂದರ್ಭದಲ್ಲಿ ಪೇರಳೆ ಮರವೊಂದಕ್ಕೆ ಮಹಿಳೆಯ ಬಟ್ಟೆ ಸಿಲುಕಿಕೊಂಡಿತು. ಆ ಕೂಡಲೇ ಪ್ರಾಣ ಉಳಿಸುಕೊಳ್ಳಲು ಮರವೇ ಸುರಕ್ಷಿತ ಎಂದು ತಿಳಿದ ಮಹಿಳೆ ಮರ ಹತ್ತಿ ಕುಳಿತಿದ್ದಾರೆ. ತನ್ನ ಪತಿ ಬದುಕಿದ್ದರೂ ಇಲ್ಲವೋ ಎಂಬುದು ಈ ಮಹಿಳೆಗೆ ಆ ಸಂದರ್ಭದಲ್ಲಿ ತಿಳಿದು ಬರಲಿಲ್ಲ. ಆಕೆಯ ಕೈಯಲ್ಲೊಂದು ಪುಟ್ಟ ಟಾರ್ಚ್ ಇದ್ದು ತನ್ನನ್ನು ಕಾಪಾಡಿ ಎಂದು ಟಾರ್ಚ್ ಬೆಳಗಿಸಿ ಮಹಿಳೆ ಹೇಳುತ್ತಿದ್ದರು.
ಇನ್ನು ಮಹಿಳೆಯು ಬುಧವಾರ ರಾತ್ರಿ 9.30ರಿಂದ ಗುರುವಾರ ಬೆಳಗ್ಗೆ 4ಗಂಟೆವರೆಗೆ ಮರದಲ್ಲಿಯೇ ಇದ್ದು ಗುರುವಾರ ಮುಂಜಾನೆ ಚಂಡಮಾರುತದ ತೀವ್ರತೆ ಕಡಿಮೆಯಾದ ಬಳಿಕ ಆಕೆಯನ್ನು ನಾವು ರಕ್ಷಣೆ ಮಾಡಿದೆವು ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅಂಜಲಿಯವರು, ಅದೃಷ್ಟವಶಾತ್ ನನ್ನ ಪತಿಯೂ ಬದುಕಿ ಉಳಿದಿದ್ದಾರೆ. ಅವರು ನದಿ ನೀರು ಕೊಚ್ಚಿಹೋದಾಗ ಬಿದಿರು ಹಿಡಿದು ಬದುಕಿದ್ದಾರೆ. ಆದರೆ ಮನೆ ಹಾಗೂ ಎಲ್ಲಾ ವಸ್ತುಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು ಇನ್ನು ಮುಂದಿನ ಜೀವನದ ಬಗ್ಗೆಯೇ ಚಿಂತೆ ಉಂಟಾಗಿದೆ. ಸದ್ಯಕ್ಕೆ ಅಂಪನ್ ಚಂಡಮಾರುತದಿಂದ ರಕ್ಷಣೆ ಪಡೆಯಲು ಸುಮಾರು 100ರಷ್ಟು ಜನರು ಪ್ಲಾಸ್ಟಿಕ್ ಶೀಟ್ಗಳಿಂದ ಮಾಡಿದ ಟೆಂಟ್ಗಳಲ್ಲಿ ವಾಸವಾಗಿದ್ದೇವೆ ಎಂದು ತಿಳಿಸಿದ್ದಾರೆ.