ಬೆಂಗಳೂರು, ಮೇ 25(Daijiworld News/MSP): ಎರಡು ತಿಂಗಳ ಬಳಿಕ ದೇಶಾದ್ಯಂತ ವಿಮಾನ ಯಾನ ಪುನರಾರಂಭಗೊಂಡಿದ್ದು, ಸೋಮವಾರ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ವಿಮಾನಗಳು ದೆಹಲಿಯಿಂದ ನೂರಾರು ಪ್ರಯಾಣಿಕರನ್ನು ಹೊತ್ತು ತಂದಿದ್ದವು. ಈ ವೇಳೆ ಮಾತೃ ವಾತ್ಸಲ್ಯ ಸೆಳೆತದ ಘಟನೆಯೊಂದಕ್ಕೆ ವಿಮಾನ ನಿಲ್ದಾಣ ಸಾಕ್ಷಿಯಾಯಿತು.
ಲಾಕ್ ಡೌನ್ ನಿಂದಾಗಿ ಕಳೆದ ಎರಡು ತಿಂಗಳಿನಿಂದ ದೆಹಲಿಯಲ್ಲಿ ತನ್ನ ಅಜ್ಜಿ ಮನೆಯಲ್ಲಿ ಸಿಲುಕಿಕೊಂಡಿದ್ದ ಐದು ವರ್ಷದ ಪುಟಾಣಿ ವಿಹಾನ್ ಅಮ್ಮನ ಬಳಿ ಬರಲು ಸಾಧ್ಯವಾಗಿರಲಿಲ್ಲ. ಆದರೆ ಎರಡು ತಿಂಗಳಿಂದ ಅಮ್ಮನನ್ನು ಬಿಟ್ಟಿದ್ದ ವಿಹಾನ್ ತಾಯಿ ಬಳಿ ಹಾತೊರೆಯುತ್ತಿದ್ದ. ಸೋಮವಾರ ಏಕಾಂಗಿಯಾಗಿ ವಿಮಾನವನ್ನೇರಿ 5 ವರ್ಷದ ಬಾಲಕ ಬೆಂಗಳೂರಿಗೆ ಬಂದು ತಾಯಿಯ ಮಡಿಲು ಸೇರಿಕೊಂಡಿದ್ದಾನೆ.
ಅಮ್ಮನ ಬಳಿ ಬರಲು ಹಾತೊರೆಯುತ್ತಿದ್ದ ಬಾಲಕನನ್ನು ದೆಹಲಿ ಏರ್ ಪೋರ್ಟ್ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಸ್ಪಷಲ್ ಕ್ಯಾಟಗರಿ ಮೂಲಕ ಬಾಲಕನನ್ನು ಕರೆತಂದಿದ್ದಾರೆ. ಹಳದಿ ಬಣ್ಣದ ಬಟ್ಟೆ ತೊಟ್ಟಿದ್ದ ವಿಹಾನ್ ಮುಖದ ಮಾಸ್ಕ್ ಕೂಡಾ ಹಳದಿ ಬಣ್ಣದ್ದಾಗಿತ್ತು. ಕೈಯಲ್ಲಿ ಸ್ಪೆಷಲ್ ಕೆಟಗರಿ ಪ್ಲೇಕಾರ್ಡ್ ಹಿಡಿದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ.
ಇನ್ನೂ ಇತ್ತ ಕಡೆ ಬಾಲಕನ ತಾಯಿಯೂ ಬೆಳಗ್ಗೆಯೇ ಮಗನಿಗಾಗಿ ಬಂದು ವಿಮಾನ ನಿಲ್ದಾಣದಲ್ಲಿ ಕಾದು ಕುಳಿತ್ತಿದ್ದರು. ವಿಮಾನ ಬಂದಿಳಿದ ತಕ್ಷಣ ವಿಹಾನ್ ನನ್ನು ಎರ್ ಪೋರ್ಟ್ ಸಿಬ್ಬಂದಿಗಳು ಆತನ ತಾಯಿ ಬಳಿ ಕರೆತಂದು ಬಿಟ್ಟಿದ್ದಾರೆ. ಎರಡು ತಿಂಗಳಿಂದ ಅಮ್ಮ ನನ್ನು ನೋಡದೆ ಇದ್ದ ವಿಹಾನ್ ತಾಯಿ ಬಳಿ ಬಂದು ತಬ್ಬಿ ಕಣ್ಣೀರಿಟ್ಟಿದ್ದಾನೆ.