ರಾಯಚೂರು, ಮೇ 25 (DaijiworldNews/PY) : ಯರ್ಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಕಲ್ಲಿದ್ದಲು ಸಾಗಣೆ ವಿಭಾಗದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಇದರಿಂದಾಗಿ ಲಕ್ಷಾಂತರ ರೂಪಾಯಿ ಹಾನಿಯಾಗಿದೆ.
ಬೇಸಿಗೆಯ ಬಿಸಿಲಿನ ಕಾರಣದಿಂದ ಕಲ್ಲಿದ್ದಲು ಯಾರ್ಡ್ ನಲ್ಲಿ ಆಗಾಗ ಬೆಂಕಿ ಕಾಣಸಿಕೊಳ್ಳುವುದು ಸಾಮಾನ್ಯವಾಗಿದೆ. ಕಲ್ಲಿದ್ದಲನ್ನು ಘಟಕಕ್ಕೆ ರವಾನೆ ಮಾಡಬೇಕಾದರೆ, ಬೆಂಕಿ ನಂದಿಸಬೇಕು. ಆದರೆ, ಬೆಂಕಿಯನ್ನು ನಂದಿಸದೇ ಬೆಲ್ಟ್ ಮೇಲೆ ಹೋಗಲು ಬಿಟ್ಟ ಕಾರಣದಿಂದ ಬೆಂಕಿ ಹೊತ್ತಿಕೊಂಡಿದ್ದು, ಪರಿಣಾಮ ಬೆಲ್ಟ್ ಸುಟ್ಟುಹೋಗಿದೆ.
ಬೆಂಕಿಯ ಅವಘಡದಿಂದಾಗಿ, ಲಕ್ಷಾಂತರರ ರೂಪಾಯಿ ಮೌಲ್ಯದ ಕಲ್ಲಿದ್ದಲು ಸಾಗಣೆಯ ಬೆಲ್ಟ್ ಮತ್ತು ಯಂತ್ರೋಪಕರಣಕ್ಕೆ ಹಾನಿಯಾಗಿದೆ. ಹಾಗಾಗಿ ಚಲಿಸುವ ಇನ್ನೊಂದು ಕಲ್ಲಿದ್ದಲು ಸಾಗಣೆ ಮಾರ್ಗದಿಂದ ಕೇಂದ್ರಕ್ಕೆ ಕಲ್ಲಿದ್ದಲು ರವಾನೆಯಾಗುತ್ತಿದೆ.
ಬೆಂಕಿಯಿಂದ ಸುಟ್ಟುಹೋಗಿರುವ ಬೆಲ್ಟ್ ಅನ್ನು ದುರಸ್ತಿ ಮಾಡಲಾಗಿದ್ದು, ವೈಟಿಪಿಎಸ್ನ ಸಿಬ್ಬಂದಿಗಳು ಕೆಲಸ ಆರಂಭ ಮಾಡಿದ್ದಾರೆ. ಕಲ್ಲಿದ್ದಲು ಸಾಗಣೆಯ ಸಂದರ್ಭ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ ಕಾರಣ ಈ ಅವಘಡ ಸಂಭವಿಸಿದೆ. ಆದರೆ, ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.